ಬೆಂಗಳೂರು: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ವಾಟ್ಸಪ್ ಮೂಲಕ ವಿಡಿಯೊ ಕರೆ ಮಾಡಿ ಹನಿಟ್ರ್ಯಾಪ್ ಮಾಡಲು ಯತ್ನಿಸಿದ ನಲಪಾಡ್ ಬ್ರಿಗೇಡ್ ನ ಅಧ್ಯಕ್ಷೆಯನ್ನು ವಶಕ್ಕೆ ಪಡೆಯಲಾಗಿದೆ.
ವಿಡಿಯೋ ಕಾಲ್ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಜುಳಾ ಪಾಟೀಲ ಹಾಗೂ ಪತಿ ಶಿವರಾಜ್ ಪಾಟೀಲ ಬಂಧಿತ ಆರೋಪಿಗಳು. ಆರೋಪಿಗಳು ಕಲಬುರಗಿಯ ಆಳಂದ ರಸ್ತೆಯ ವಿಜಯನಗರ ಕಾಲೊನಿ ನಿವಾಸಿಗಳು. ಮಂಜುಳಾ ಪಾಟೀಲ್ ಖೆಡ್ಡಾಗೆ ಮಾಜಿ ಸಚಿವರು ಮಾತ್ರ ಅಲ್ಲ, ಮತ್ತಷ್ಟು ಜನ ಬಿದ್ದಿದ್ದರು ಎನ್ನಲಾಗಿದೆ. ಸದ್ಯ ಮಹಿಳೆಯ ಮೊಬೈಲ್ ಫೋನ್ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದ ಮಂಜುಳಾ, ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣ ಮಾಲೀಕಯ್ಯ ಅವರಿಗೆ ಪರಿಚಯವಾಗಿದ್ದಳು. ಹೀಗಾಗಿ ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು. ಈ ನಡುವೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಮಹಿಳೆ, ಅವುಗಳನ್ನು ಮುಂದಿಟ್ಟುಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಳು. 2 ದಿನ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವ ಮಾಲೀಕಯ್ಯ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ನಡೆಸಲು ಮಂಜುಳಾ ದಂಪತಿ ಮುಂದಾಗಿದ್ದರು. ಹೀಗಾಗಿ ಮಾಜಿ ಸಚಿವರ ಪುತ್ರ ರಿತೇಶ್ ದೂರು ನೀಡಿದ್ದರು. ಸದ್ಯ ದೂರಿನ ಅನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಗರುಡಾ ಮಾಲ್ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು ಎಂಟು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಹೀಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಿಸಿಬಿ ಬಲೆಗೆ ಬಿದ್ದಿರುವ ಮಂಜುಳಾ ಪಾಟೀಲ್ ಬ್ಯಾಗ್ ನಲ್ಲಿ 6 ಸ್ಮಾರ್ಟ್ ಪೋನ್ ಗಳು ಪತ್ತೆಯಾಗಿವೆ. ಸದ್ಯ ಅಧಿಕಾರಿಗಳು ಅವುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೊಬೈಲ್ ನಲ್ಲಿ ಜಿಪಂನ ಮಾಜಿ ಸದಸ್ಯ, ಪೊಲೀಸ್ ಅಧಿಕಾರಿ , ಪಿಡಬ್ಲೂಡಿ ಅಧಿಕಾರಿ ಸೇರಿದಂತೆ 8 ಜನರ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ.