ಬೆಂಗಳೂರು: ಹನಿಟ್ರ್ಯಾಪ್ (Honey Trap) ವಿಚಾರವಾಗಿ ಶಾಸಕ ಮುನಿರತ್ನ ಅವರು ವಿಧಾನಸೌಧದಲ್ಲೇ ಭಾವುಕರಾಗಿ ಮಾತನಾಡಿದ್ದಾರೆ.
ಸಚಿವರು ಹಾಗೂ ಕೇಂದ್ರದ ಮುಖಂಡರಿಗೂ ಹನಿಟ್ರ್ಯಾಪ್ ಮಾಡಲಾಗಿದೆ ಅಂತಾ ಕೆಲ ಸಚಿವರೇ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ (Munirathna) ಮಾತನಾಡಿ, ಹನಿಟ್ರ್ಯಾಪ್ ಟೀಮ್ ಯಾರು ಅನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಈ ವೇಳೆ ದೇವರ ಫೋಟೋ ತೋರಿಸಿ ಮಾತನಾಡಿದ್ದಾರೆ.
ಹಿಂದೆ ನನಗೆ ಮತ್ತು ರಮೇಶ್ ಜಾರಕಿಹೊಳಿಗೆ ಹನಿಟ್ರ್ಯಾಪ್ ಮಾಡಿದ್ದರು. ನಾನು ಕಾಂಗ್ರೆಸ್ನಿಂದ ಬಿಜೆಪಿಗೆ ಹೋದಾಗಲೇ ಪ್ರಯತ್ನ ಪಟ್ಟಿದ್ದಾರೆ. ಈಗ ರಾಜಣ್ಣಗೆ ಹನಿಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಹೋಮ್ ಮಿನಿಸ್ಟರ್ ಈಗ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದಾರೆ. ಇದು ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ಶಾಸಕರ ಜೀವನ ಹಾಳಾಗುತ್ತದೆ. ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾಗಿದ್ದಾರೆ.
ಮೆಂಟಲೀ ನಾನು ಡಿಸೈಡ್ ಆಗಿದ್ದೇನೆ, ನಾನು ಸತ್ರೂ ಪರವಾಗಿಲ್ಲ. ದಾಖಲೆ ಸಮೇತ ನಾನು ಕಂಪ್ಲೆಂಟ್ ಕೊಡುತ್ತೇನೆ. ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಅತ್ಯಾಚಾರ ಮಾಡಿದ್ದೇನೆ ಅಂತ ಆರೋಪ ಮಾಡಿದ್ದಾರೆ. 15 ವರ್ಷದ ಮೊಮ್ಮಕ್ಕಳು ಇದ್ದಾರೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮನೆ ಹಾಳು ಮಾಡಿದರು. ಶಾಸಕ ರಮೇಶ್ ಜಾರಕಿಹೊಳಿ ಮನೆ ಹಾಳು ಮಾಡಿದರು. ಈಗ ನನ್ನ ಮನೆ ಹಾಳು ಮಾಡಿದ್ದಾರೆ. ಮುಂದೆ ಹಲವರು ಇದೇ ರೀತಿ ಬಲಿಯಾಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.