ಶ್ರೀಗಂಗಾನಗರ: ಮೇಘಾಲಯದ ಹನಿಮೂನ್ ಮರ್ಡರ್ ಪ್ರಕರಣವು ದೇಶವನ್ನು ಬೆಚ್ಚಿಬೀಳಿಸಿದ ಬೆನ್ನಲ್ಲೇ ಇದೀಗ ಇದೇ ಮಾದರಿಯ ಮತ್ತೊಂದು ಕೊಲೆ ನಡೆದಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತ ಆಶಿಶ್ ಎಂಬವರನ್ನು ಅವರ ಪತ್ನಿ ಅಂಜು, ತನ್ನ ಪ್ರಿಯತಮನ ಜೊತೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದಾಳೆ. ಮೇಲ್ನೋಟಕ್ಕೆ ಇದೊಂದು ‘ಹಿಟ್ ಅಂಡ್ ರನ್’ ಅಪಘಾತದಂತೆ ಕಂಡರೂ, ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಇದು ವ್ಯವಸ್ಥಿತವಾಗಿ ನಡೆದ ಹನಿಮೂನ್ ಕೊಲೆ ಎಂಬುದು ಸಾಬೀತಾಗಿದೆ.
ಅಂದು ರಾತ್ರಿ ನಡೆದಿದ್ದೇನು?
ಅದು ಜನವರಿ 30ರ ಶುಕ್ರವಾರ ರಾತ್ರಿ. ಸುಮಾರು 9 ಗಂಟೆಗೆ ಪೊಲೀಸರಿಗೆ ರಸ್ತೆಯ ಮೇಲೆ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಆಶಿಶ್ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಘಟನೆಯ ಬಗ್ಗೆ ಮಾಹಿತಿ ನೀಡಿದ್ದ ಪತ್ನಿ ಅಂಜು, ತಾವು ರಾತ್ರಿ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ವಾಹನವೊಂದು ಬಂದು ಡಿಕ್ಕಿ ಹೊಡೆಯಿತು ಎಂದು ಕಥೆ ಕಟ್ಟಿದ್ದಳು. ಅಷ್ಟೇ ಅಲ್ಲದೆ, ಅಪಘಾತದ ನಂತರ ದುಷ್ಕರ್ಮಿಗಳು ತನ್ನ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ನಾಟಕವಾಡಿದ್ದಳು.
ವೈದ್ಯಕೀಯ ವರದಿಯಿಂದ ಅನುಮಾನ
ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಗಿತ್ತು. ಆಗ ಅಂಜು ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ವೈದ್ಯಕೀಯ ವರದಿಯಲ್ಲಿ ಆಶಿಶ್ ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದವು ಮತ್ತು ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾದ ಲಕ್ಷಣಗಳು ಗೋಚರಿಸಿದ್ದವು. ಆದರೆ ಅಚ್ಚರಿಯೆಂದರೆ, ವಾಹನ ಡಿಕ್ಕಿ ಹೊಡೆದಿದೆ ಎಂದು ಹೇಳಿಕೊಂಡಿದ್ದ ಅಂಜುಗೆ ಯಾವುದೇ ಗಾಯಗಳಾಗಿರಲಿಲ್ಲ. ಅಂಜು ನೀಡುತ್ತಿದ್ದ ಹೇಳಿಕೆಗಳು ವಾಸ್ತವಕ್ಕೆ ದೂರವಾಗಿದ್ದ ಕಾರಣ ಪೊಲೀಸರು ಆಕೆಯ ಮೊಬೈಲ್ ಕರೆಗಳ ವಿವರವನ್ನು (CDR) ಪರಿಶೀಲಿಸಿದಾಗ ಘೋರ ಸತ್ಯ ಹೊರಬಂತು.
ಪ್ರಿಯತಮನ ಜೊತೆಗೂಡಿ ಸ್ಕೆಚ್
ಅಂಜು ಮದುವೆಯ ನಂತರ ಸಂತೋಷವಾಗಿರಲಿಲ್ಲ ಮತ್ತು ಆಗಾಗ್ಗೆ ತನ್ನ ತವರಿಗೆ ಹೋಗುತ್ತಿದ್ದಳು. ಅಲ್ಲಿ ತನ್ನ ಹಳೆಯ ಪ್ರಿಯತಮ ಸಂಜು ಜೊತೆ ಮತ್ತೆ ಸಂಪರ್ಕ ಬೆಳೆಸಿದ್ದಳು. ಇವರಿಬ್ಬರೂ ಸೇರಿ ಆಶಿಶ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಜ.30ರ ರಾತ್ರಿ ಅಂಜು ತನ್ನ ಪತಿಯನ್ನು ವಾಕಿಂಗ್ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಳು. ಅಲ್ಲಿ ಅಂಜುವಿನ ಪ್ರಿಯತಮ ಸಂಜು ಮತ್ತು ಆತನ ಸಹಚರರಾದ ರಾಕಿ ಹಾಗೂ ಬಾದಲ್ ಪೊದೆಗಳಲ್ಲಿ ಅವಿತು ಕುಳಿತಿದ್ದರು. ಆಶಿಶ್ ಬರುತ್ತಿದ್ದಂತೆಯೇ ಅವರ ಮೇಲೆ ದಾಳಿ ಮಾಡಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಇದನ್ನು ರಸ್ತೆ ಅಪಘಾತ ಎಂದು ತೋರಿಸಲು ಆಶಿಶ್ ಶವವನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು.
ಮೇಘಾಲಯ ಹನಿಮೂನ್ ಮರ್ಡರ್ ನೆನಪು
ಈ ಘಟನೆಯು ಈ ಹಿಂದೆ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯದ ಸೋನಂ ರಘುವಂಶಿ ಪ್ರಕರಣವನ್ನು ನೆನಪಿಸಿದೆ. ಅಲ್ಲಿಯೂ ಸಹ ಸೋನಂ ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ ವೇಳೆ ಪ್ರಿಯತಮನ ಸಹಾಯದಿಂದ ಕೊಲೆ ಮಾಡಿದ್ದಳು. ರಾಜಸ್ಥಾನದ ಈ ಪ್ರಕರಣದಲ್ಲಿಯೂ ಸಹ ಅಂಜು ತನ್ನ ಫೋನ್ ಮತ್ತು ಕಿವಿಯೋಲೆಗಳನ್ನು ಸಂಜು ಕೈಗೆ ಕೊಟ್ಟು, ದರೋಡೆಯಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು. ಸದ್ಯ ಪೊಲೀಸರು ಪತ್ನಿ ಅಂಜು, ಪ್ರಿಯತಮ ಸಂಜು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿರುವ ‘ಇಟಲಿ’ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ!



















