ತುಮಕೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ಭಾರೀ ಸದ್ದು ಮಾಡುತ್ತಿದೆ. ಈ ವೇಳೆ ಮತ್ತೊಮ್ಮೆ ಗುಡುಗಿರುವ ಸಚಿವ ಕೆ.ಎನ್. ರಾಜಣ್ಣ, ಹನಿಟ್ರ್ಯಾಪ್ ಮಾಡಲು ಬಂದವರ ಕಪಾಳಕ್ಕೆ ಹೊಡೆದಿದ್ದೇನೆ. ಅದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ರೀತಿ ನಡೆಯಬಾರದು ಎಂದು ಗುಡುಗಿದ್ದಾರೆ.
ನಾಲ್ಕೈದು ದಿನಗಳ ನಂತರ ನಾನು ಗೃಹ ಸಚವರಿಗೆ ಹಾಗೂ ಸಿಎಂಗೆ ದೂರು ನೀಡುತ್ತೇನೆ. ಈಗಾಗಲೇ ಸಿಎಂ ನಿನಗೆ ದೇವರು ಹೇಗೆ ಬುದ್ಧಿ ಕೊಡುತ್ತಾನೋ ಆ ರೀತಿ ಮಾಡು ಅಂದಿದ್ದಾರೆ. ನನ್ನನ್ನೇ ಯಾಕೆ ಹನಿಟ್ರ್ಯಾಪ್ ನವರು ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ. ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಹಾಗಾಗಿ ನನಗೆ ಕೆಟ್ಟದಾಗಲ್ಲ. ಹಾಗಂತ ಸಾರ್ವಜನಿಕ ಜೀವನದಲ್ಲಿ ತೇಜೋವಾಧೆ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
ಒಂದೂವರೆ ತಿಂಗಳುಗಳಿಂದ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ವಿಷ ಕನ್ಯೆಯರ ರೀತಿ ಇಲ್ಲೂ ಇದ್ದಾರೆ. ಆದ್ದರಿಂದ ಈ ವಿಚಾರ ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ಚಿಂತನೆ ಇದೆ. ಸಚಿವ ಸತೀಶ್ ಜಾರಕಿಹೊಳಿ ಇದನ್ನು ಗಂಭೀರವಾಗಿ ಪರಿಗಣಿಸೋಣ ಅಂದಿದ್ದಾರೆ ಎಂದು ಹೇಳಿದ್ದಾರೆ.