ಕಾರವಾರ: ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಾಕಂಬಿ ಬಳಿ ಈ ಘಟನೆ ನಡೆದಿದೆ. ಹುಬ್ಬಳಿಯ ಆದರ್ಶ ಕಳಸೂರ ಹೆಜ್ಜೇನು ದಾಳಿಗೆ ಬಲಿಯಾಗಿರುವ ವ್ಯಕ್ತಿ. ನಾಲ್ಕು ಜನ ಪ್ರವಾಸಿಗರು ಗೋಕರ್ಣಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಹೊಸ ಕಂಬಿ ಬಳಿ ಫೋಟೋ ತೆಗೆಯಲು ನಿಂತಿದ್ದಾಗ ಯುವಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ನಡೆಸಿವೆ.
ಹೆಜ್ಜೇನು ದಾಳಿ ನಡೆಸುತ್ತಿದ್ದಂತೆ ಯುವಕರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಕೊನೆಗೂ ಕಾರು ಹತ್ತಿ ಆಸ್ಪತ್ರೆ ಹುಡುಕಾಡಿ ಸಂಜೆ ವೇಳೆ ಗೋಕರ್ಣ ಖಾಸಗಿ ಆಸ್ಪತ್ರೆಯನ್ನು ಪ್ರವಾಸಿಗರು ತಲುಪಿದ್ದಾರೆ. ಆದರೆ, ಚಿಕಿತ್ಸೆ ತಲುಪುವಷ್ಟರಲ್ಲಿ ಆದರ್ಶ್ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನುಳಿದ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.