ಬೆಂಗಳೂರು: ಗೃಹ ಸಾಲ, ವಾಹನ ಸಾಲ ಸೇರಿ ಯಾವುದೇ ರೀತಿಯ ವೈಯಕ್ತಿಕ ಸಾಲ ಮಾಡಿದವರಿಗೆ ದೇಶದ ಮೂರು ಪ್ರಮುಖ ಬ್ಯಾಂಕ್ ಗಳು ಸಿಹಿ ಸುದ್ದಿ ನೀಡಿವೆ. ಹೌದು, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳು ಬಡ್ಡಿದರವನ್ನು ಕಡಿಮೆ ಮಾಡಿದ್ದು, ಇದರಿಂದ ಸಾಲಗಾರರ ಮೇಲಿನ ಇಎಂಐ ಹೊರೆಯು ಕಡಿಮೆಯಾಗಲಿದೆ.
ಮೂರೂ ಬ್ಯಾಂಕ್ ಗಳು ಹೋಮ್ ಲೋನ್, ಪರ್ಸನಲ್ ಲೋನ್ ಹಾಗೂ ವೆಹಿಕಲ್ ಲೋನ್ ಬಡ್ಡಿದರಗಳನ್ನು ಕಡಿತಗೊಳಿಸಿವಿವೆ. ಹಲವು ಅವಧಿಗಳ ಸಾಲದ ಮೇಲಿನ ಬಡ್ಡಿದರಗಳು 5 ರಿಂದ 15 ಮೂಲಾಂಶಗಳಷ್ಟು ಕಡಿಮೆಯಾಗಿದೆ. ಮೇ 12ರಿಂದಲೇ ಬಡ್ಡಿದರದ ಇಳಿಕೆಯ ನಿಯಮಗಳು ಅನ್ವಯವಾಗುತ್ತಿದ್ದು, ಮುಂದಿನ ತಿಂಗಳಿನಿಂದಲೇ ಸಾಲಗಾರರ ಇಎಂಐ ಮೊತ್ತವು ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.
ಏನಿದು ಎಂಸಿಎಲ್ಆರ್?
ಎಂಸಿಎಲ್ಆರ್ ಎಂಬುದು ಒಂದು ಬೆಂಚ್ ಮಾರ್ಕ್ ದರವಾಗಿದೆ. ಇದನ್ನು ಬ್ಯಾಂಕುಗಳು ಫ್ಲೋಟಿಂಗ್-ರೇಟ್ ಸಾಲಗಳ ಬಡ್ಡಿ ದರಗಳನ್ನು ನಿರ್ಧರಿಸಲು ಬಳಸುತ್ತವೆ. ಗೃಹ ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ವಾಹನ ಸಾಲಗಳು ಇವುಗಳಲ್ಲಿ ಸೇರಿವೆ. ಎಂಸಿಎಲ್ಆರ್ ಕಡಿಮೆಯಾದರೆ, ಸಾಲದ ಇಎಂಐ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಸಾಲಗಾರರಿಗೆ ದೀರ್ಘಾವಧಿಯಲ್ಲಿ ಅನುಕೂಲವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ಆರ್ ಬಿಐ ಎರಡು ಬಾರಿ ರೆಪೊ ದರವನ್ನು ಇಳಿಕೆ ಮಾಡಿದೆ. 50 ಮೂಲಾಂಶಗಳನ್ನು ಕಡಿತಗೊಳಿಸಿದ ಕಾರಣ ಬ್ಯಾಂಕುಗಳು ಬಡ್ಡಿದರವನ್ನು ಇಳಿಕೆ ಮಾಡುತ್ತಿವೆ. ಕೆಲ ದಿನಗಳ ಹಿಂದಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್, ಎಚ್ ಡಿ ಎಫ್ ಸಿ ಸೇರಿ ಹಲವು ಬ್ಯಾಂಕುಗಳು ಬಡ್ಡಿದರವನ್ನು ಇಳಿಕೆ ಮಾಡಿದ್ದವು.