ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಕೂಡ ಒಂದು. ಆದರೆ, ಪ್ರತಿ ತಿಂಗಳು ಮಹಿಳೆಯರ ಅಕೌಂಟ್ ಗೆ ಹಣ ಹೋಗದಿರುವುದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಯೋಜನೆ ಜಾರಿಗೆ ಬಂದಾಗಿನಿಂದಲೂ ಮಹಿಳೆಯರ ಅಕೌಂಟ್ ಗೆ ಹಣ ಬರುತ್ತಿಲ್ಲ. ಇತ್ತೀಚೆಗಷ್ಟೇ ಜೂನ್ ತಿಂಗಳ ಹಣ ಹಾಕಲಾಗಿತ್ತು. ಈಗ ಮಹಿಳೆಯಲು ಜುಲೈ ತಿಂಗಳ ಹಣಕ್ಕಾಗಿ ಕಾಯುತ್ತಿದ್ದಾರೆ.

ಆದರೆ, ಯಾವಾಗ ಬರುತ್ತದೆ ಎಂಬುವುದೂ ಅವರಿಗೆ ತಿಳಿಯದಾಗಿದೆ. ಹೀಗಾಗಿ ಗೃಹಲಕ್ಷ್ಮಿಯರು ಬ್ಯಾಂಕಿಗೂ ಮನೆಗೂ ಪರದಾಡುತ್ತಿದ್ದಾರೆ. ಹೌದು, ಜುಲೈ, ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳ ಅಂತ್ಯಗೊಂಡರೂ ಗೃಹಲಕ್ಷ್ಮಿ ಹಣ ಮಾತ್ರ ಲಕ್ಷ್ಮಿಯರ ಖಾತೆ ಸೇರಿಲ್ಲ.
ಸದ್ಯದ ಮಾಹಿತಿಯಂತೆ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಗೃಹ ಲಕ್ಷ್ಮೀಯರ ಅಕೌಂಟ್ ಗೆ ಹಾಕುವುದಕ್ಕಾಗಿ ಇಲಾಖೆಯಿಂದ ಮೂರು ತಿಂಗಳ ಕಂತಿನ ಹಣ ಕೇಳಲಾಗಿತ್ತು. ಆದರೆ, ಒಂದೇ ತಿಂಗಳ ಹಣವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡಿತ್ತು.
ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗೆ 2500 ಕೋಟಿ ರೂ. ಹಣ ಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮೂರು ತಿಂಗಳ ಅನುದಾನ ಅಂದರೆ ಒಟ್ಟು 7500 ಕೋಟಿ ಹಣ ಬಿಡುಗಡೆಗೆ ಪತ್ರ ಬರೆಯಲಾಗಿದ್ದು, ಹಣ ಬಿಡುಗಡೆಯಾಗಬೇಕಿದೆ.