ಬೆಂಗಳೂರು: ನೀವು ಶಿವಮೊಗ್ಗ ಜಿಲ್ಲೆಯವರಾ? ಎಸ್ಸೆಸ್ಸೆಲ್ಸಿ ಪಾಸಾಗಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಗೃಹ ರಕ್ಷಕ ದಳದ (Home Guard Recruitment 2026) ಘಟಕಗಳಲ್ಲಿ ಖಾಲಿ ಇರುವ ಪುರುಷ ಹಾಗೂ ಮಹಿಳಾ ಗೃಹರಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಮೂಲಕ ಉದ್ಯೋಗ ಪಡೆಯಬಹುದಾಗಿದೆ.
“ನಿಷ್ಕಾಮ ಸೇವೆ’’ ಧ್ಯೇಯದ ಅಡಿಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗೃಹರಕ್ಷಕರಾಗಿ ನೇಮಕಾತಿ ಹೊಂದಿದವರಿಗೆ ಮಾಸಿಕ ಸಂಬಳ ಇರುವುದಿಲ್ಲ. ಬದಲಾಗಿ ಅವರಿಗೆ ಗೌರವ ಧನ ನೀಡಲಾಗುತ್ತದೆ. ಪೊಲೀಸ್ ಇಲಾಖೆಗೆ ಬೆಂಬಲವಾಗಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಹತೆಗಳು ಏನೇನು?
ಅರ್ಜಿಗಳನ್ನು ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರಬೇಕು. ಯಾವುದೇ ಪ್ರಕರಣಗಳಲ್ಲಿ ಅಪರಾಧಿಯಾಗಿರಬಾರದು ಎಂದು ಪ್ರಕಟಣೆ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವವರು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಿವಮೊಗ್ಗ ವಿಳಾಸದಲ್ಲಿ ಅರ್ಜಿ ಪಡೆಯಬಹುದು. (ಸಹಾಯವಾಣಿ-08182 – 295630 & 255630). ಹಾಗೆಯೇ, ಜಿಲ್ಲೆಯ ಎಲ್ಲ ಗೃಹರಕ್ಷಕ ದಳ ಘಟಕ/ ಉಪ ಘಟಕಗಳ ಕಚೇರಿಗಳಲ್ಲಿ ಅರ್ಜಿಯನ್ನು ಪಡೆಯಬೇಕು. ಭರ್ತಿಮಾಡಿದ ಅರ್ಜಿಗಳನ್ನು ಫೆಬ್ರವರಿ 3ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟರಾದ ಡಾ. ಚೇತನ ಎಚ್.ಪಿ ಪ್ರಕಟಣೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ RITES ಸಂಸ್ಥೆಯಲ್ಲಿ 48 ಹುದ್ದೆಗಳ ನೇಮಕಾತಿ | ನೇರ ಸಂದರ್ಶನದ ದಿನಾಂಕ ಇಲ್ಲಿದೆ



















