ಮುಂಬೈನಲ್ಲಿ ನಡೆದ WAVES Summit 2025 ರಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಸಹ ಸಂಸ್ಥಾಪಕ ಚಲುವೇ ಗೌಡ ಭಾಗವಹಿಸಿದ್ದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮುಂಬೈನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ವಿಶ್ವ ಆಡಿಯೋ ವಿಷ್ಯುವಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆ (WAVES Summit 2025) ಯಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಸಹ ಸಂಸ್ಥಾಪಕ ಚಲುವೇ ಗೌಡ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಸಮಾವೇಶವು ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಬೆಳವಣಿಗೆ, ನಾವೀನ್ಯತೆ ಮತ್ತು ಜಾಗತಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಿದೆ.
“RRR” ಚಿತ್ರದ ಸಂಕಲನಕಾರ ಎ. ಶ್ರೀಕರ್ ಪ್ರಸಾದ್ ಹಾಗೂ ಆಸ್ಕರ್ ಸಮಿತಿಯ ಸದಸ್ಯ ಮತ್ತು ಭಾರತೀಯ ಚಲನಚಿತ್ರ ಒಕ್ಕೂಟದ ತಾಂತ್ರಿಕ ಸಲಹೆಗಾರ ಉಜ್ವಲ್ ನಿರ್ಗುಡ್ಕರ್ ಅವರನ್ನೊಳಗೊಂಡ ಆಸಕ್ತಿದಾಯಕ ಚರ್ಚೆಯಲ್ಲಿ ಚಲುವೇಗೌಡ ಭಾಗವಹಿಸಿದ್ದರು.

ಈ ವೇಳೆ, ಹೊಂಬಾಳೆ ಫಿಲ್ಮ್ಸ್‌ನ ಅಂತರರಾಷ್ಟ್ರೀಯ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು. ಅದರಲ್ಲೂ ವಿಶೇಷವಾಗಿ “ಕಾಂತಾರ ಭಾಗ 1” ಚಿತ್ರವನ್ನು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ಕಾರ್ಯತಂತ್ರ ರೂಪಿಸಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದು, ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.
ಆಸ್ಕರ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವ ಮತ್ತು ಪ್ರಚಾರ ಮಾಡುವ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಅರಿವು ಮತ್ತು ಶಿಕ್ಷಣದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು. “ಆಸ್ಕರ್ ಅರ್ಜಿ ಮತ್ತು ಪ್ರಚಾರ ಪ್ರಕ್ರಿಯೆಯ ಕುರಿತು ಸ್ಪಷ್ಟ ತಿಳುವಳಿಕೆಯ ಕೊರತೆಯಿದೆ. ಇಂತಹ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಿದರೆ, ಹೆಚ್ಚಿನ ಭಾರತೀಯ ಸೃಷ್ಟಿಕರ್ತರಿಗೆ ಜಾಗತಿಕವಾಗಿ ತಮ್ಮ ಛಾಪು ಮೂಡಿಸಲು ಸಾಧ್ಯವಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.