ಕೊಡಗು : ಕರುನಾಡ ಜೀವನದಿ ಕಾವೇರಿಯು ತೀರ್ಥೋದ್ಭವದಲ್ಲಿ ದೈವ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೀರ್ಥೋದ್ಭವ ಜರುಗಿದೆ.
ಇಂದು ಮಧ್ಯಾಹ್ನ 1:44 ಗಂಟೆಗೆ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋಧ್ಭವಾಗಿದೆ. ಮುಂಜಾನೆಯಿಂದಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆದವು. ಅರ್ಚಕರ ತಂಡ ಕೂಡ ಕಾವೇರಿ ಮಾತೆಗೆ ಭವ್ಯ ಸ್ವಾಗತ ಮಾಡಿದ್ದಾರೆ.
ಮಾತೆಯ ದರ್ಶನಕ್ಕೆ ಸಹಸ್ರ ಸಹಸ್ರ ಭಕ್ತರು ಆಗಮಿಸಿದ್ದ ಹಿನ್ನಲೆ ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ತೀರ್ಥಸ್ವರೂಪಿಣಿಯಾದ ಕಾವೇರಿ ಮಾತೆಯ ದರ್ಶನವನ್ನು ಅಪಾರ ಭಕ್ತರು ಪಡೆಯುತ್ತಿದ್ದಾರೆ. ಭಕ್ತರು ಕಾವೇರಿಯ ಪವಿತ್ರ ಕೊಳದಲ್ಲಿ ಮಿಂದೆದ್ದಿದ್ದಾರೆ.