ಮಹಾಕುಂಭನಗರ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಆಧ್ಯಾತ್ಮಿಕ ವೈಭವಕ್ಕೆ ಮಾರುಹೋದ ಪಾಕಿಸ್ತಾನದ 68 ಮಂದಿ ಹಿಂದೂ ಭಕ್ತರು ನೇರವಾಗಿ ಭಾರತಕ್ಕೆ ಬಂದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾಗಿದ್ದಾರೆ. ಸಂಗಮದಲ್ಲಿ ಮಿಂದೆದ್ದು, ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಈ ಭಕ್ತರ ಗುಂಪು ಮೊದಲಿಗೆ ಹರಿದ್ವಾರಕ್ಕೆ ಭೇಟಿ ನೀಡಿ, ತಮ್ಮ ಸುಮಾರು 480 ಮಂದಿ ಪೂರ್ವಜರ ಚಿತಾಭಸ್ಮವನ್ನು ವಿಸರ್ಜಿಸಿ, ಬಳಿಕ ಅಲ್ಲಿಂದ ಮಹಾಕುಂಭಕ್ಕೆ ತೆರಳಿದರು. ಅಲ್ಲಿ ಪವಿತ್ರ ಗಂಗಾ, ಯಮುನಾ, ಸರಸ್ವತಿಯ ಸಂಗಮ ಸ್ಥಳದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಂಡರು. ನಂತರ ಪವಿತ್ರ ಸ್ನಾನ ಮಾಡಿದರು ಎಂದು ಅವರೊಂದಿಗಿದ್ದ ಮಹಾಂತ ರಾಮನಾಥ್ ತಿಳಿಸಿದ್ದಾರೆ.
“ಕಳೆದ ಎರಡು-ಮೂರು ತಿಂಗಳಿಂದ ಮಹಾಕುಂಭಮೇಳದ ಬಗ್ಗೆ ತಿಳಿದಾಗಿನಿಂದಲೂ, ನಾವು ಇಲ್ಲಿಗೆ ಭೇಟಿ ನೀಡಬೇಕೆಂದು ಬಯಸಿದ್ದೆವು. ಇಲ್ಲಿಗೆ ಬರದಂತೆ ನಮ್ಮನ್ನು ತಡೆಯಲು ನಮಗೇ ಸಾಧ್ಯವಾಗಲಿಲ್ಲ” ಎಂದು ಸಿಂಧ್ ನಿವಾಸಿ ಗೋವಿಂದ್ ರಾಮ್ ಮಖೇಜಾ ಹೇಳಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನದ 250 ಮಂದಿ ಪ್ರಯಾಗ್ ರಾಜ್‌ಗೆ ಬಂದು, ಗಂಗೆಯಲ್ಲಿ ಮಿಂದಿದ್ದರು. ಈ ಬಾರಿ ಸಿಂಧ್ ಪ್ರಾಂತ್ಯದ 6 ಜಿಲ್ಲೆಗಳಿಂದ ಅಂದರೆ ಘೋಟ್ಕಿ, ಸುಕ್ಕೂರು, ಖೈರ್ ಪುರ, ಶಿಕಾರ್ಪುರ, ಕರ್ಕೋಟ್ ಮತ್ತು ಜಟಾಬಲ್‌ನಿಂದ 68 ಭಕ್ತರು ಆಗಮಿಸಿದ್ದಾರೆ. ಈ ಪೈಕಿ 50 ಮಂದಿ ಇದೇ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿದ್ದಾರೆ. ಇದೊಂದು ವಿಶಿಷ್ಟ ಅನುಭವ. ಅದನ್ನು ಪದಗಳಲ್ಲಿ ಬಣ್ಣಿಸಲಾಗದು. ನಾಳೆ, ಮತ್ತೊಮ್ಮೆ ಪುಣ್ಯ ಸ್ನಾನ ಮಾಡುವ ಆಸೆಯಿದೆ. ಇಲ್ಲಿಗೆ ಬಂದ ಬಳಿಕ ನಮಗೆ ಸನಾತನ ಧರ್ಮದ ಪರಂಪರೆ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದೂ ಮಖೇಜಾ ತಿಳಿಸಿದ್ದಾರೆ. 11ನೇ ತರಗತಿ ವಿದ್ಯಾರ್ಥಿನಿ ಸುರಭಿ ಕೂಡ ಈ ಗುಂಪಿನೊಂದಿಗೆ ಆಗಮಿಸಿದ್ದು, ಇದು ಭಾರತಕ್ಕೆ ಮತ್ತು ಕುಂಭಮೇಳಕ್ಕೆ ನನ್ನ ಮೊದಲ ಭೇಟಿ ಎಂದಿದ್ದಾರೆ.
ಸಿಂಧ್ ನಲ್ಲಿ ನಾವು ಮುಸ್ಲಿಮರೊಂದಿಗೆ ಹುಟ್ಟಿ ಬೆಳೆದವರು. ಎಲ್ಲರೂ ಆರೋಪಿಸುವಂತೆ, ಅಲ್ಲಿ ಹಿಂದೂಗಳ ಬಗ್ಗೆ ಯಾರೂ ತಾರತಮ್ಯ ಮಾಡುವುದಿಲ್ಲ. ಆದರೆ, ನಮ್ಮ ಸಂಸ್ಕೃತಿ, ಪರಂಪರೆಗೆ ಭಾರತದಲ್ಲಿ ಸಾಕ್ಷಿಯಾಗುತ್ತಿರುವುದು ಒಂದು ದೈವಿಕ ಮತ್ತು ಅಸಾಮಾನ್ಯ ಅನುಭವ ಎಂದು ಸಿಂಧ್‌ನ ಗೃಹಿಣಿ ಪ್ರಿಯಾಂಕಾ ಹೇಳಿದ್ದಾರೆ. ಜೊತೆಗೆ ಇಂದು ಸಂಜೆ ನಾವು ವಿವಿಧ ಅಖಾಡಾಗಳ ಸಾಧು-ಸಂತರನ್ನು ಭೇಟಿಯಾಗಲಿದ್ದೇವೆ ಎಂದೂ ತಿಳಿಸಿದ್ದಾರೆ.