ಕನ್ನಡದ ನಟ ಯಶ್ ನಟಿಸುತ್ತಿರುವ, ನಿರ್ಮಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕಾಗಿ ಈಗ ವಿದೇಶದಿಂದ ವಿದೇಶಿ ಕಲಾವಿದರು, ತಂತ್ರಜ್ಞರು ಆಗಮಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಹಾಲಿವುಡ್ ನಟರು ನಟಿಸುತ್ತಿದ್ದಾರೆ. ಅಲ್ಲದೇ, ವಿದೇಶದ ಅತ್ಯುತ್ತಮ ತಂತ್ರಜ್ಞರು ಕೂಡ ಟಾಕ್ಸಿಕ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ವಿಎಫ್ಎಕ್ಸ್, ಗ್ರಾಫಿಕ್ಸ್, ಮಿನಿಯೇಚರ್ ನಿರ್ಮಾಣ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಹಾಲಿವುಡ್ ನ ಜನಪ್ರಿಯ ಸಂಸ್ಥೆಯೊಂದಿಗೆ ಒಪ್ಪಂದ ಕೂಡ ಮಾಡಲಾಗಿದೆ. ಹೀಗಾಗಿ ಹಾಲಿವುಡ್ ನ ತಂತ್ರಜ್ಞರ ತಂಡ ಮುಂಬಯಿಗೆ ಆಗಮಿಸುತ್ತಿದೆ.
ಹಾಲಿವುಡ್ ನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಐರನ್ ಮ್ಯಾನ್’, ‘ಎಕ್ಸ್ ಮ್ಯಾನ್’, ‘ಜಾನ್ ವಿಕ್ 2’ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ದೇಶಕ್ಕೆ ಬಂದಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯವನ್ನು ನಿರ್ದೇಶನ ಮಾಡಲಿರುವ ಜೆಜೆ ಪೆರ್ರಿ ತಯಾರಿ ನಡೆಸುತ್ತಿದ್ದಾರೆ.
ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಹಲವು ದಿನಗಳ ಕಾಲ ಬೆಂಗಳೂರಿನ ಎಚ್ಎಂಟಿಯಲ್ಲಿ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ಮಾಡಲಾಗಿದೆ. ಆನಂತರ ಚಿತ್ರ ತಂಡ ಮುಂಬೈಗೆ ತೆರಳಿದೆ. ಮುಂಬಯಿನಲ್ಲಿ 60 ದಿನಗಳ ಕಾಲ ಚಿತ್ರೀಕರಣ ನಡೆಯಲಿವೆ. ಹೀಗಾಗಿ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳು ಮೂಡುತ್ತಿವೆ.