ಚಿಕ್ಕೋಡಿ: ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Government) ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಜಾರಿ ಮಾಡಿದೆ. ಈ ಪೈಕಿ ಗೃಹ ಲಕ್ಷ್ಮೀ ಯೋಜನೆ ಒಂದಾಗಿದ್ದು, ಇದು ಮಹಿಳೆಯರಿಗೆ ಆಸರೆಯಾಗಿದೆ. ವೃದ್ಧೆಯೊಬ್ಬರು ಸಿದ್ದರಾಮಯ್ಯ ಅವರು ರಾಜಕೀಯವಾಗಿ ಬೆಳೆಯಲಿ ಎಂದು ಹೋಳಿಗೆ ಊಟ ಹಾಕಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣ ಸಾವಿರಾರು ಮಹಿಳೆಯರಿಗೆ ಸಹಾಯಕವಾಗಿ ನಿಂತಿದೆ. ಹೀಗಾಗಿ ಹಲವೆಡೆ ಮಹಿಳೆಯರು ಸರ್ಕಾರದ ಯೋಜನೆಯನ್ನು ಕೊಂಡಾಡಿರುವ ಉದಾಹರಣೆಗಳು ಸಿಗುತ್ತವೆ. ಈಗ ಇಲ್ಲೊಬ್ಬರು ಅಜ್ಜಿ ತನಗೆ ಬಂದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆ ತನಗೆ ಬಂದ ಹಣದಿಂದ ಊರಿಗೆಲ್ಲಾ ಹೋಳಿಗೆ ಊಟ ಹಾಕಿಸಿದ್ದಾರೆ. ಸಿದ್ದರಾಮಯ್ಯ ಅವರು ನಮಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಹಾಕುತ್ತಿದ್ದಾರೆ. ಹೀಗಾಗಿ ಅವರು ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಕಾರಣಕ್ಕೆ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಐದು ಜನ ಮುತ್ತೈದೆಯರಿಗೆ ಉಡಿ ತುಂಬಿ ಅಜ್ಜಿ ಹರಿಸಿದ್ದಾರೆ. ಅಜ್ಜಿಯ ಕಾರ್ಯಕ್ಕೆ ಸುಟ್ಟಟ್ಟಿ ಗ್ರಾಮದ ಮಹಿಳೆಯರು ಸಾಥ್ ನೀಡಿದ್ದಾರೆ.