ಇತ್ತೀಚಿನ ಮಕ್ಕಳು ವ್ಯಸನದ ದಾಸರಾಗುತ್ತಿರುವುದು ಆತಂಕದ ವಿಷಯ. ಅದರಲ್ಲಿಯೂ ಶ್ರೀಮಂತರ ಮಕ್ಕಳು ಹೆಚ್ಚಾಗಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ದರಂತವೇ ಸರಿ. ಇತ್ತೀಚಿಗೆ ತ್ರಿಪುರಾ ಜರ್ನಲಿಸ್ಟ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್ ಎಸಿಎಸ್ (TSACS) ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಆತಂಕಕಾರಿ ವಿಷಯ ಹೊರಬಿದ್ದಿದೆ.
ತ್ರಿಪುರಾದಲ್ಲಿ 800ಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ HIV ವೈರಸ್ ಪತ್ತೆಯಾಗಿದ್ದು, 47 ಜನ ವಿದ್ಯಾರ್ಥಿಗಳು ಏಡ್ಸ್‌ಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ. ಎಚ್ ಐವಿ ಒಂದು ವೈರಸ್. ಅದನ್ನು ಸರಿಯಾಗಿ ರೋಗನಿರ್ಣಯ ಮಾಡದಿದ್ದರೆ ಅಥವಾ ಚಿಕಿತ್ಸೆಯನ್ನು ಪ್ರಾರಂಭಿಸದಿದ್ದರೆ, ರೋಗವು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಏಡ್ಸ್ ರೋಗ ಆರಂಭವಾಗುತ್ತದೆ.

ತ್ರಿಪುರಾ ರಾಜ್ಯದ 220 ಶಾಲೆಗಳು ಹಾಗೂ 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದು ಪತ್ತೆಯಾಗಿದೆ ಎಂದಿರುವ ತ್ರಿಪುರಾ ಏಡ್ಸ್ ನಿಯಂತ್ರಣ ಸೊಸೈಟಿ, HIV ಸೋಂಕು ಹರಡಲು ಇದೂ ಕಾರಣ ಆಗಿರಬಹುದು ಎಂಬ ಆತಂಕ ಶುರುವಾಗಿದೆ.
ಮೇ 2024ರ ವೇಳೆಗೆ ತ್ರಿಪುರಾದ ART (ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರ ಒಟ್ಟು 8,729 HIV ಸೋಂಕಿತ ವ್ಯಕ್ತಿಗಳನ್ನು ನೋಂದಾಯಿಸಿವೆ. ಅದರಲ್ಲಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬರು ಮಂಗಳಮುಖಿ ಒಳಗೊಂಡಿದ್ದಾರೆ. ಸೋಂಕಿತರ ಪೈಕಿ 5,674 ಜನರು ಜೀವಂತವಾಗಿದ್ದಾರೆ ಎಂದು TSACS ಅಧಿಕಾರಿ ಬಹಿರಂಗಪಡಿಸಿದೆ.
ಈ ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತರ ಮನೆ ಮಕ್ಕಳು. ಸಾಕಷ್ಟು ವಿದ್ಯಾರ್ಥಿಗಳ ತಂದೆ – ತಾಯಿ ಇಬ್ಬರಿಗೂ ಸರ್ಕಾರಿ ನೌಕರಿ ಇದೆ. ಹೀಗಾಗಿ, ಮಕ್ಕಳ ಕೈನಲ್ಲಿ ಸಾಕಷ್ಟು ಹಣ ಓಡಾಡುವ ಕಾರಣ ಅವರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿಯೇ ಇಂತಹ ವಿದ್ಯಾರ್ಥಿಗಳು ಚಟಕ್ಕೆ ದಾಸರಾಗಿ, ಇಂತಹ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬ ಆತಂಕ ಕಾಡುತ್ತಿದೆ.