ದಾವಣಗೆರೆ: ಬರೀ 5 ರೂ. ಕುರ್ ಕುರೆ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತೆರಳಿ 10ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುರ್ ಕುರೆ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನೇಬಾಗಿಯ ಅತೀಫ್ ಉಲ್ಲಾ ಹಾಗೂ ಸದ್ದಾಂ ಕುಟುಂಬದ ಮಧ್ಯೆ ಮಾರಾಮಾರಿ ನಡೆದಿದೆ. ಅತೀಫ್ ಉಲ್ಲಾ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ. ಆ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್ ಕುರೆ ಖರೀದಿಸಿದ್ದರು.
ಅವಧಿ ಮುಗಿದ ಕುರ್ ಕುರೇ ನೀಡಿದ್ದೀಯಾ ಬೇರೆ ಕುರ್ ಕುರೆ ಕೊಡು ಎಂದಿದ್ದಕ್ಕೆ ಈ ಗಲಾಟೆ ನಡೆದಿದೆ. ಸದ್ಯ ಈ ಕುರಿತು ಸದ್ದಾಂ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಹಳೆಯ ದ್ವೇಷದಿಂದ ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸದ್ದಾಂ ಕುಟುಂಬದ ಮೇಲೆ ಏಕಾಏಕಿ ಕಾರಿನಲ್ಲಿ ಬಂದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಡಿಸಲು ಬಂದವರ ಮೇಲೆಯೂ ಹಲ್ಲೆ ನಡೆಸಿದ್ದು, ಗಾಯಗೊಂಡವರನ್ನು ಚನ್ನಗಿರಿ, ಭದ್ರಾವತಿ ಹಾಗೂ ಶಿವಮೊಗ್ಗ ಅಸ್ಪತ್ರೆಗಳಿಗೆ ದಾಖಲಿಸಲಾಗಿದೆ
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.