ಲಕ್ನೋ: ಉತ್ತರ ಪ್ರದೇಶದ ಮೀರತ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದನಾ ಜಾಲವೊಂದನ್ನು ಭೇದಿಸಿರುವ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ (ATS), ತನಿಖೆಯ ವೇಳೆ ಬೆಚ್ಚಿಬೀಳಿಸುವ ಸತ್ಯಾಂಶಗಳನ್ನು ಹೊರಹಾಕಿದೆ. ಭದ್ರತಾ ಏಜೆನ್ಸಿಗಳ ಕಣ್ಣು ತಪ್ಪಿಸಲು ಈ ಜಾಲವು ಹಿಂದೂ ಯುವಕರನ್ನು ಬಳಸಿಕೊಳ್ಳುತ್ತಿತ್ತು ಹಾಗೂ ಭಾರತದಾದ್ಯಂತ ಅಸ್ಥಿರತೆ ಉಂಟುಮಾಡುವ ‘ಘಜ್ವಾ-ಎ-ಹಿಂದ್‘ ಎಂಬ ಅಪಾಯಕಾರಿ ಕಾರ್ಯಾಚರಣೆಯ ಗುರಿಯನ್ನು ಹೊಂದಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಭಯೋತ್ಪಾದನಾ ಜಾಲದ ಮುಖ್ಯಸ್ಥ ಶಾಕಿಬ್ ಅಲಿಯಾಸ್ ಡೆವಿಲ್ ಎಂಬಾತ ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ನೇರ ಸಂಪರ್ಕದಲ್ಲಿದ್ದ. ಭದ್ರತಾ ತಪಾಸಣೆಗಳಿಂದ ತಪ್ಪಿಸಿಕೊಳ್ಳಲು ಶಾಕಿಬ್‌ಗೆ ಹಿಂದೂ ಯುವಕರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಅದರಂತೆ ಹಣದ ಆಮಿಷವೊಡ್ಡಿ ವಿಕಾಸ್ ಮತ್ತು ಲೋಕೇಶ್ ಎಂಬ ಯುವಕರನ್ನು ಈ ಜಾಲಕ್ಕೆ ಸೆಳೆಯಲಾಗಿತ್ತು. ಇವರಿಗೆ ಗುಪ್ತನಾಮಗಳನ್ನು ನೀಡಲಾಗಿದ್ದು, ಲೋಕೇಶ್‌ನನ್ನು ‘ಸಲೀಂ’ ಮತ್ತು ವಿಕಾಸ್‌ನನ್ನು ‘ಜಾಹಿದ್’ ಎಂದು ಕರೆಯಲಾಗುತ್ತಿತ್ತು. ಹಿಂದೂಗಳಂತೆ ಸುಲಭವಾಗಿ ಧಾರ್ಮಿಕ ಸ್ಥಳಗಳು ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ಪಡೆಯಲು ಇವರನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಜಾಲಕ್ಕೆ ದುಬೈ ಲಿಂಕ್
ಈ ಇಡೀ ಜಾಲದ ಹಿಂದೆ ದುಬೈನಲ್ಲಿ ನೆಲೆಸಿರುವ ಆಕಿಬ್ ಎಂಬಾತನ ಕೈವಾಡ ಇರುವುದು ಪತ್ತೆಯಾಗಿದೆ. ಆಕಿಬ್ ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಸಂಪರ್ಕಿಸಿ, ಅವರಿಗೆ ಎಕೆ-47 ರೈಫಲ್‌ಗಳ ವಿಡಿಯೋ ಮತ್ತು ಪ್ರಚೋದನಾತ್ಮಕ ಸಂದೇಶಗಳನ್ನು ಕಳುಹಿಸಿ ಬ್ರೈನ್ ವಾಶ್ ಮಾಡುತ್ತಿದ್ದ. ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಮತ್ತು ಶಾಕಿಬ್ ನಡುವೆ ಈತನೇ ಕೊಂಡಿಯಾಗಿದ್ದ. ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯುವಕರಿಗೆ ದೊಡ್ಡ ಮೊತ್ತದ ಹಣದ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಎಟಿಎಸ್ ತಿಳಿಸಿದೆ.
ಸೇನಾ ನೆಲೆಗಳ ಮೇಲೆ ಹದ್ದಿನ ಕಣ್ಣು
ಬಂಧಿತ ಆರೋಪಿಗಳು ಉತ್ತರ ಪ್ರದೇಶದ ಪ್ರಮುಖ ಸೇನಾ ನೆಲೆಗಳು ಮತ್ತು ಕಂಟೋನ್ಮೆಂಟ್ ಪ್ರದೇಶಗಳ ರಹಸ್ಯ ಸಮೀಕ್ಷೆ ನಡೆಸಿದ್ದರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಹ್ಯಾಂಡ್ಲರ್‌ಗಳು ಗೂಗಲ್ ಲೊಕೇಶನ್ ಕಳುಹಿಸುತ್ತಿದ್ದ ಜಾಗಗಳಿಗೆ ತೆರಳಿ ಅಲ್ಲಿನ ವಿಡಿಯೋಗಳನ್ನು ಚಿತ್ರೀಕರಿಸಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು. ಇದಲ್ಲದೆ, ಪ್ರಮುಖ ಹಿಂದೂ ನಾಯಕರು ಮತ್ತು ಧಾರ್ಮಿಕ ಕೇಂದ್ರಗಳ ಭದ್ರತೆಯ ಬಗ್ಗೆಯೂ ಇವರು ಮಾಹಿತಿ ಕಲೆಹಾಕುತ್ತಿದ್ದರು. ರೈಲ್ವೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ಎಸಗುವ ಸಂಚೂ ಇವರ ಪಟ್ಟಿಯಲ್ಲಿತ್ತು.
ಯುಪಿ ಎಟಿಎಸ್ ಈಗಾಗಲೇ ಶಾಕಿಬ್, ಅರ್ಬಾಬ್, ವಿಕಾಸ್ ಮತ್ತು ಲೋಕೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಅವರ ಪ್ರಕಾರ, ಈ ರೀತಿಯ ಮಾಡ್ಯೂಲ್‌ಗಳು ಈ ಹಿಂದೆಯೂ ಲಕ್ನೋ ಮತ್ತು ಸಹರಾನ್ಪುರದಲ್ಲಿ ಪತ್ತೆಯಾಗಿದ್ದವು. ಈಗ ಸಿಕ್ಕಿರುವ ಜಾಲವು ಕೇವಲ ಒಂದು ಭಾಗವೋ ಅಥವಾ ಇದರ ಹಿಂದೆ ಇನ್ನೂ ದೊಡ್ಡ ಜಾಲವಿದೆಯೇ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.
ಇದನ್ನೂ ಓದಿ : ಇಲಿಗಳ ಕಾಟಕ್ಕೆ ಅಮೆರಿಕದ ವಿಭಿನ್ನ ಬ್ರೇಕ್ : ‘ಮೂಷಿಕ ಪಡೆ’ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಮಾತ್ರೆ!



















