ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಹಿಂದೂ ದೇವಾಲಯ(Hindu Temple)ವನ್ನು ವಿರೂಪಗೊಳಿಸಿರುವ ಘಟನೆಯನ್ನು ಭಾರತವು ತೀವ್ರವಾಗಿ ಖಂಡಿಸಿದೆ. ಇದೊಂದು ಹೇಯ ಮತ್ತು ವಿಧ್ವಂಸಕ ಕೃತ್ಯ. ಇದನ್ನು ನಾವು ಕಟು ಪದಗಳಿಂದ ಖಂಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ನಾವು ಅಮೆರಿಕದ ಕಾನೂನು ಜಾರಿ ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದು ಭಾರತ ಹೇಳಿದೆ.
ಚಿನೋ ಹಿಲ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಅಪವಿತ್ರಗೊಂಡಿದೆ ಎಂದು ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಆರೋಪಿಸಿತ್ತು. ಲಾಸ್ ಏಂಜಲೀಸ್‌ನಲ್ಲಿ ‘ಖಲಿಸ್ತಾನಿ ಜನಾಭಿಪ್ರಾಯ ಸಂಗ್ರಹ’ ಅಭಿಯಾನ ಆರಂಭವಾಗುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ದುಷ್ಕರ್ಮಿಗಳು ಬಿಎಪಿಎಸ್ ಹಿಂದೂ ದೇವಾಲಯವನ್ನು ವಿರೂಪಗೊಳಿಸಿದ್ದು, “ಮೋದಿ ಮುರ್ದಾಬಾದ್, ಹಿಂದುಸ್ಥಾನ್ ಮುರ್ದಾಬಾದ್” ಎಂಬ ಸಂದೇಶಗಳನ್ನೂ ಬರೆಯಲಾಗಿದೆ.
‘ಮತ್ತೊಂದು ದೇವಾಲಯದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದು, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಂತಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ ಎಂದಿಗೂ ದ್ವೇಷ ಬೇರೂರಲು ನಾವು ಬಿಡುವುದಿಲ್ಲ. ದ್ವೇಷದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಬಿಎಪಿಎಸ್ ಸಾರ್ವಜನಿಕ ವ್ಯವಹಾರಗಳ ವಿಭಾಗ ಹೇಳಿದೆ.
ಉತ್ತರ ಅಮೆರಿಕದ ಹಿಂದೂಗಳ ಮೈತ್ರಿ ಸಂಘಟನೆಯೂ ಘಟನೆಯನ್ನು ಖಂಡಿಸಿದೆ. ಆದರೆ, ಚಿನೋ ಹಿಲ್ಸ್ ಪೊಲೀಸ್ ಇಲಾಖೆ ಈ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.