ಚಿಕ್ಕಮಗಳೂರು : ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಅವರಿಗೆ ಜು. 6 ರಿಂದ ಆ.4ರವರೆಗೆ 30 ದಿನಗಳ ಕಾಲ ಕಾಫಿನಾಡು ಚಿಕ್ಕಮಗಳೂರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಶರಣ್ ಪಂಪ್‌ವೆಲ್ ಅವರನ್ನು ಕರೆಸಿ ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರಿನಲ್ಲಿ ಬೈಠೆಕ್ ಹಮ್ಮಿಕೊಳ್ಳಲಾಗಿತ್ತು. 22ಕ್ಕೂ ಹೆಚ್ಚು ಪ್ರಕರಣಗಳು ಶರಣ್ ಮೇಲೆ ದಾಖಲಾಗಿವೆ. ಬಲಪಂಥೀಯ ನಿಲುವಿನಿಂದ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿರುವ ಶರಣ್ ಪಂಪ್‌ವೆಲ್, ಕೋಮುದ್ವೇಷ ಹರಡುವ ಭಾಷಣ ಮಾಡುವ ಪ್ರವೃತ್ತಿ ಉಳ್ಳವರಾಗಿದ್ದಾರೆ. ಇವರ ಪ್ರಚೋದನಾಕಾರಿ ಭಾಷಣದಿಂದ ಗಲಾಟೆ, ಗುಂಪು ಘರ್ಷಣೆಗಳಂತಹ ಸನ್ನಿವೇಶಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.
ದ್ವೇಷ ಭಾಷಣ ಮಾಡುವವರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಅದರ ಮುಂದುವರಿದ ಭಾಗವಾಗಿ ಚಿಕ್ಕಮಗಳೂರಿ ಜಿಲ್ಲೆಗೆ ಶರಣ್ ಪಂಪ್‌ವೆಲ್ ಅವರಿಗೆ 30 ದಿನಗಳ ಕಾಲ ಬರದಂತೆ ನಿರ್ಬಂಧ ಹೇರಿ ಆದೇಶಿಸಿದ್ದಾರೆ.
ಚಿಕ್ಕಮಗಳೂರು ಸೇರಿ ಕೆಲ ಪಟ್ಟಣಗಳು ಮತೀಯ ಸೂಕ್ಷö್ಮ ಪ್ರದೇಶಗಳಾಗಿವೆ. ಸಣ್ಣ ಘಟನೆಯೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳಿವೆ. ಹಾಗಾಗಿ ಮುಂದಿನ 30 ದಿನಗಳ ಕಾಲ ಶರಣ್ ಅವರಿಗೆ ಚಿಕ್ಕಮಗಳೂರು ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಲಾಗಿದೆ.