ಬೆಳಗಾವಿ: ರಾಜ್ಯದ ಯೋಧರೊಬ್ಬರು ಲಡಾಖ್ ನಲ್ಲಿ ಹುತಾತ್ಮರಾಗಿರುವ ಘಟನೆ ನಡೆದಿದೆ.
ಜಮ್ಮು-ಕಾಶ್ಮೀರದ (Jammu-Kashmir) ಲಡಾಖ್ ನಲ್ಲಿ (Ladakh) ಗುಡ್ಡ ಕುಸಿದ ಪರಿಣಾಮ ಬೆಳಗಾವಿ (Belagavi) ಮೂಲದ ಯೋಧ ಹುತಾತ್ಮರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರಣಟ್ಟಿ ಗ್ರಾಮದ ಮಹೇಶ್ ಎಂಬ ಯೋಧ ಹುತಾತ್ಮರಾದವರು. ಡಿ. 14ರಂದು ಲಡಾಖ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಕೂಡಲೇ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದಾರೆ..
ಸೈನಿಕ ಮಹೇಶ್ ಅವರ ಪಾರ್ಥಿವ ಶರೀರವು ಮಂಗಳವಾರ ಸಂಜೆ ಇರಣಟ್ಟಿ ಗ್ರಾಮಕ್ಕೆ ಆಗಮಿಸಿತು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗೌರವ ಸಮರ್ಪಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ಮಹೇಶ್ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ಹಿಂದಿನ ತಿಂಗಳಷ್ಟೇ ಮಹೇಶ ಅವರ ನಿಶ್ಚಿತಾರ್ಥ ಆಗಿತ್ತು. ಆದರೆ, ಅಷ್ಟರಲ್ಲಿ ಮಹೇಶ ಹುತಾತ್ಮರಾಗಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿತ್ತು.