ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸ ಮುಗಿಸಿ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಕುವೈತ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಆ ದೇಶದ ಅತ್ಯುನ್ನತ ನಾಗರಿಕ ಸನ್ಮಾನವಾದ ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬಯಾನ್ ಅರಮನೆಯಲ್ಲಿ ಮೋದಿಗೆ ಭರ್ಜರಿ ಸ್ವಾಗತ ಕೋರಿದ ಕುವೈತ್ ಸರ್ಕಾರ, ಆಯ್ದ ಜಾಗತಿಕ ನಾಯಕರಿಗೆ ಮಾತ್ರ ಈ ಅತ್ಯುನ್ನತ ಪ್ರಶಸ್ತಿ ನೀಡುತ್ತದೆ. ಹಿಂದೆ, ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್, ಬಿಲ್ ಕ್ಲಿಂಟನ್ ಮತ್ತು ಪ್ರಿನ್ಸ್ ಚಾರ್ಲ್ಸ್ ಅವರಿಗೆ ಈ ಗೌರವ ನೀಡಿ ಗೌರವಿಸಲಾಗಿತ್ತು. ಈಗ ಪ್ರಧಾನಿ ಮೋದಿಗೆ ಈ ಅಪರೂಪದ ರಾಜತಾಂತ್ರಿಕ ಗೌರವ ನೀಡಿದೆ.
ಅಷ್ಟೇ ಅಲ್ಲದೇ, ಪ್ರಧಾನಿ ಮೋದಿಗೆ ಬೀಳ್ಕೊಡುಗೆ ನೀಡಲು ವಿಮಾನ ನಿಲ್ದಾಣದವರೆಗೂ ಕುವೈತ್ ಪ್ರಧಾನಿ ಶೇಖ್ ಅಹಮದ್ – ಅಲ್ – ಅಬ್ದುಲ್ಲಾ- ಅಲ್ – ಶಭಾ ಆಗಮಿಸಿ, ವಿಶೇಷ ಗೌರವ ಸಲ್ಲಿಸಿದ್ದಾರೆ.
ಅಲ್ಲದೇ, ಕುವೈತ್ ತೋರಿಸಿದ ಪ್ರೀತಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಧನ್ಯವಾದ ಅರ್ಪಿಸಿದ್ದಾರೆ. ಟ್ವೀಟ್ ಮೂಲಕ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಧನ್ಯವಾದ ಕುವೈತ್, ಇದೊಂದು ಚಾರಿತ್ರಾರ್ಹ ಭೇಟಿಯಾಗಿದೆ. ದ್ವಿಪಕ್ಷೀಯ ಸಂಬಂಧಕ್ಕೆ ಇನ್ನಷ್ಟು ಬಲ ನೀಡಲಿದೆ. ಕುವೈತ್ ಸರ್ಕಾರ ಮತ್ತು ಅಲ್ಲಿನ ಜನತೆಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ. ಕುವೈತ್ ಪ್ರಧಾನಿ ಶೇಖ್ ಅಹಮದ್ – ಅಲ್ – ಅಬ್ದುಲ್ಲಾ- ಅಲ್ – ಶಭಾ, ವಿಮಾನ ನಿಲ್ದಾಣದವರೆಗೆ ಬಂದು ನನ್ನನ್ನು ಬೀಳ್ಕೊಟ್ಟರು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.