ಕೋಲಾರ: ರಾಜ್ಯ ಸರ್ಕಾರಕ್ಕೆ ಅರಣ್ಯ ಭೂಮಿ ಒತ್ತುವರಿ ವಿಷಯದಲ್ಲಿ ಹೈಕೋರ್ಟ್ ಛೀಮಾರಿ ಹಾಕಿರುವ ಪ್ರಸಂಗ ನಡೆದಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪವಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಜಿನಕಲಕುಂಟೆ ಅರಣ್ಯ ಪ್ರದೇಶದಲ್ಲಿನ ಹೊಸಹುಡ್ಯ ಗ್ರಾಮದ ಹತ್ತಿರ ಇರುವ 61.39 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪವಿದೆ. ಈ ವಿಚಾರವಾಗಿ ಕೋರ್ಟ್ ನಲ್ಲಿ ದಾವೆ ಇದೆ.
ಈ ವೇಳೆ ಹೈಕೋರ್ಟ್, ಅರಣ್ಯ ಹಾಗೂ ಕಂದಾಯ ಇಲಾಖೆಗೆ ಜಂಟಿ ಸರ್ವೇ ಮಾಡಿ ಒತ್ತುವರಿಯಾಗಿದ್ದಲ್ಲಿ ತೆರವು ಮಾಡಿ ಎಂದು ಸೂಚಿಸಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಏನೇನೋ ಕಾರಣ ನೀಡಿ ಮೂರು ಬಾರಿ ಜಂಟಿ ಸರ್ವೇ ಕಾರ್ಯ ಮುಂದೂಡಿತ್ತು. ಹೀಗಾಗಿ ಹೈಕೋರ್ಟ್, ಜ. 15ರೊಳಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ವೇ ಕಾರ್ಯ ಮುಗಿಸಿ ಜ. 30ರೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಅಲ್ಲದೇ, ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ ಎಂದು ಕೂಡ ಕೋರ್ಟ್ ಎಚ್ಚರಿಕೆ ನೀಡಿದೆ. ಸರ್ಕಾರ, ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಿಂದ ಮಾಡಿದ್ದ ಎಲ್ಲಾ ಆದೇಶಗಳನ್ನು ವಜಾ ಮಾಡಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಕ್ಷಣೆಗೆ ತೆರೆಮರೆಯ ಪ್ರಯತ್ನ ಮಾಡುತ್ತಿದ್ದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಸಂಕಷ್ಟ ಶುರುವಾದಂತಾಗಿದೆ.