ಬೆಂಗಳೂರು: ಇಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಹೈವೋಲ್ಟೇಜ್ ಸಭೆಯು ಸಿಎಂ ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆಯಲಿದೆ.
ಕಳೆದ ಆರೇಳು ತಿಂಗಳುಗಳಿಂದ ಸರ್ಕಾರ ತಾನು ನೀಡಿದ್ದ ಭರವಸೆ ಈಡೇರಿಸುತ್ತಿಲ್ಲ. ಸಂಬಳ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಲ್ಲ ಸಾರಿಗೆ ನಿಗಮಗಳ ನೌಕರಸ್ಥರು ಕಳೆದ ಡಿಸೆಂಬರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಆದರೆ, ಇದುವರೆಗೂ ಭರವಸೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಉಗ್ರ ಹೋರಾಟದ ಹಾದಿ ತುಳಿಯುವುದಾಗಿ ನೌಕರಸ್ಥರು ಕರೆ ಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸಿಎಂ, ಸಾರಿಗೆ ಸಚಿವರು ಸಭೆ ನಡೆಸಲು ಮುಂದಾಗಿದ್ದಾರೆ.
ಇಂದು ಸಂಜೆ 5ಕ್ಕೆ ಸಿಎಂ ಗೃಹ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಾರಿಗೆ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಸಾರಿಗೆ ನೌಕರರ ಹಲವು ಬೇಡಿಕೆ ಈಡೇರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಈಡೇರಿಕೆ ಬಗ್ಗೆ ಚರ್ಚೆ ನಡೆಯಲಿದೆ.