ಬೆಂಗಳೂರು: ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ನಡುವಿನ ಭರ್ಜರಿ ಹಣಾಹಣಿ ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಸೀಸನ್‌ನಲ್ಲಿ ಆರ್‌ಸಿಬಿ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿದ್ದರೆ, ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಕಂಡು ಒತ್ತಡದಲ್ಲಿದೆ. ಹೀಗಾಗಿ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದಾಗಿದೆ.
ಆರ್‌ಸಿಬಿ ತಂಡದ ಬಲಾಬಲ ಗಮನಿಸಿದರೆ, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಮತೋಲನ ಸಾಧಿಸಿರುವುದು ಗೋಚರಿಸುತ್ತದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕೂಡ ತನ್ನ ಲಯ ಕಂಡುಕೊಳ್ಳುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆಯೂ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹೊಸ ಆಟಗಾರರು ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದು, ತಂಡದ ಬಲ ಹೆಚ್ಚಿಸಿದೆ.
ಇನ್ನೊಂದೆಡೆ ಸಿಎಸ್‌ಕೆ ತಂಡದಲ್ಲಿ ಸ್ಥಿರತೆ ಕಾಣಿಸುತ್ತಿಲ್ಲ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಫಲವಾಗಿದ್ದರೆ, ಎರಡನೇ ಪಂದ್ಯದಲ್ಲಿ ಬೌಲಿಂಗ್ ನಿರಾಶೆ ಮೂಡಿಸಿದೆ. ಸಂಜು ಸ್ಯಾಮ್ಸನ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಆದರೆ ಯುವ ಆಟಗಾರ ಆಯುಷ್ ಮ್ಹಾತ್ರೆ ಭರವಸೆ ಮೂಡಿಸಿದ್ದಾರೆ.
ಒಟ್ಟಾರೆ, ಉತ್ತಮ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡಕ್ಕೆ ಸ್ವಲ್ಪ ಮೇಲುಗೈ ಇದ್ದರೂ, ಗೆಲುವಿಗಾಗಿ ಹಪಾಹಪಿಸುತ್ತಿರುವ ಸಿಎಸ್‌ಕೆ ಯಾವ ಕ್ಷಣದಲ್ಲಾದರೂ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಇಂದಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡುವ ನಿರೀಕ್ಷೆ ಇದೆ.
ಇದನ್ನೂ ಓದಿ : ಐಪಿಎಲ್ 2026 : ಸಿಎಸ್‌ಕೆ ಹೀನಾಯ ಪ್ರದರ್ಶನಕ್ಕೆ ಅಶ್ವಿನ್ ಆಕ್ರೋಶ ; ‘ಧೋನಿ ಇಲ್ಲದ ಚೆನ್ನೈ ತಂಡವನ್ನು ನೋಡುವುದು ನೋವಿನ ಸಂಗತಿ’



















