ಕೊಡಗು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಗಾಳಿ ಮಳೆಯ ಆರ್ಭಟಿಸುತ್ತಿದ್ದು, ಅವಾಂತರಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ 2018ರಲ್ಲಿ ಭೂಕುಸಿತ ಉಂಟಾಗಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಇದೀಗ ಅಂತರ್ಜಲದ ಮಟ್ಟ ಹೆಚ್ಚಾಗಿ ತಡೆಗೋಡೆಗಳಲ್ಲಿ ಬಿರುಕು ಉಂಟಾಗುತ್ತಿದ್ದು ಹೆದ್ದಾರಿ ತಡೆಗೋಡೆ ಕುಸಿಯುವ ಭೀತಿ ಸೃಷ್ಟಿಯಾಗಿದೆ.
ಈ ನಡುವೆ ಅಗಸ್ಟ್ ತಿಂಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು, ಗುಡ್ಡಗಾಡು ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಆತಂಕದಲ್ಲಿದ್ದ 6 ಕುಟುಂಬಗಳನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಡಿಕೇರಿ ಸಮೀಪದ ಕರ್ಣಗೇರಿ ಪ್ರದೇಶದಲ್ಲಿ 2018ರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಇದರಿಂದಾಗಿ ಮಡಿಕೇರಿ-ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡು ಸುತ್ತಿಬಳಸಿಕೊಂಡು ಮಡಿಕೇರಿ, ಮೈಸೂರಿನತ್ತ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಭೂಕುಸಿತ ಉಂಟಾಗಿದ್ದ ಪ್ರದೇಶದಲ್ಲಿ ತಡೆಗೋಡೆಯನ್ನ ನಿರ್ಮಾಣ ಮಾಡಿತ್ತು. ಆದರೀಗ ಮಳೆಯ ಅರ್ಭಟ ಹೆಚ್ಚಾಗುತ್ತಿರುವುದರಿಂದ ತಡೆಗೋಡೆ ಬದಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಭಾರೀ ಪ್ರಮಾಣದ ಬಿರುಕು ಮೂಡುತ್ತಿದೆ.
ತಡೆಗೋಡೆಯಲ್ಲಿ ಬಿರುಕು ಮೂಡಿರುವುದರಿಂದ ಇದರ ಕೆಳಭಾಗದಲ್ಲಿ ವಾಸಿಸುತ್ತಿರುವ ಸುಮಾರು 6 ಕುಟುಂಬಗಳನ್ನು ಜಿಲ್ಲಾಡಳಿತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ನಿರಾಶ್ರಿತರು 2018ರಲ್ಲೂ ಬಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ರಸ್ತೆಗೆ ಬರಲು ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಈಗ ತಡೆಗೋಡೆಯಲ್ಲಿ ಬಿರುಕು ಹೆಚ್ಚಾಗುತ್ತಿದ್ದು ಮನೆಗಳಲ್ಲಿ ವಾಸ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಎಲ್ಲಾ ಕುಟುಂಬಸ್ಥರು ಕಾಳಜಿ ಕೇಂದ್ರಗಳಿಗೆ ತೆರಳಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ತಡೆಗೋಡೆ ಬಿರುಕು ಬಿಟ್ಟಿರುವ ಸ್ಥಳಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, 2018ರಲ್ಲಿ ಭೂಕುಸಿತ ಉಂಟಾಗಿರುವ ಸ್ಥಳದಲ್ಲೇ ತಡೆಗೋಡೆ ಬಿರುಕು ಮೂಡಿದೆ. ಹೀಗಾಗಿ ಕೆಳಭಾಗದಲ್ಲಿ ವಾಸ ಮಾಡುವ ಜನರನ್ನು ಸ್ಥಳಾಂತರ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಸಮಸ್ಯೆ ಇಲ್ಲ, ಆದರೆ ಭೂಗರ್ಭದ ತಜ್ಞರ ಬಳಿ ಮತ್ತಷ್ಟು ಮಾಹಿತಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.