ಬೆಂಗಳೂರು | ನಗರದ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಜಿಬಿಎ ನಗರದ ಹಲವು ಕಡೆ ಹೊಸ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಕೆ.ಆರ್ ಮಾರುಕಟ್ಟೆಯಲ್ಲಿ ಹಳೆಯ ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಚ ಮಾಡಿ ಹೊಸ ಹೈಟೆಕ್ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ.

ಈಗಾಗಲೇ ಕೆ.ಅರ್ ಮಾರುಕಟ್ಟೆ ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನ ಎಲ್ಲಂದರಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿತ್ತು. ಇನ್ನು, ಈ ಹಿಂದೆ ಇದ್ದಂತಹ ಮಾರುಕಟ್ಟೆಯ ಕೆಳ ಅಂತಸ್ತಿನ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸೋದಕ್ಕೂ ಆಗದ ರೀತಿಯಲ್ಲಿ ವ್ಯವಸ್ಥೆ ಇತ್ತು. ಇದನ್ನು ಮನಗಂಡ ಜಿಬಿಎ ಹೊಸ ಪಾರ್ಕಿಂಗ್ ವ್ಯವಸ್ಥೆಗೆ ಟೆಂಡರ್ ಕರೆದಿತ್ತು.

ಹೈಟೆಕ್ ಪಾರ್ಕಿಂಗ್ ವ್ಯವಸ್ಥೆಯ ಟೆಂಡರ್ ಪಡೆದ ಖಾಸಗಿ ಸಂಸ್ಥೆಯಾದ ರೈಟ್ ಪಾರ್ಕಿಂಗ್ ಸಂಸ್ಥೆ, 7 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಸುಮಾರು 6 ಕೋಟಿ ಸ್ವಂತ ಹಣ ಖರ್ಚು ಮಾಡಿ ಕೆ.ಆರ್ ಮಾರುಕಟ್ಟೆಯ ಪಾರ್ಕಿಂಗ್ ಅನ್ನು ಅತ್ಯಾಧುನಿಕ ಮಾದರಿಯ, ಅಡ್ವಾನ್ಸ್ ಪಾರ್ಕಿಂಗ್ ಟೆಕ್ನಾಲಜಿ, ಹೈಟೆಕ್ ಆಗಿ ವಿನ್ಯಾಸಗೊಳಿಸಿದೆ.
ಈ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 400 ಬೈಕ್ ಹಾಗೂ 200 ಕಾರುಗಳನ್ನು ನಿಲ್ಲಿಸಲು ಸ್ಥಳಾವಕಾಶವಿದೆ. 24 ಗಂಟೆಯೂ ತೆರೆದಿರುವ ಈ ಪಾರ್ಕಿಂಗ್ ಪ್ರದೇಶ, ವಾಹನ ಬಳಕೆದಾರರಿಗೆ ಉಚಿತ WIFI, ಕುಡಿಯುವ ನೀರು, ಸುಸಜ್ಜಿತವಾದ ಶೌಚಾಲಯ, ಕಾಫಿ ಶಾಪ್ ಹಾಗೂ ಮಹಿಳೆಯರಿಗೆ ಮತ್ತು ವಿಶೇಷ ಚೇತನರಿಗೆ ವಿಶೇಷ ಕಾರು ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡಲಾಗಿದೆ.
ಹಾಗೆಯೇ ಎಮರ್ಜೆನ್ಸಿ ಕರೆಗೆ ಬಟನ್ ಅಳವಡಿಸಲಾಗಿದ್ದು, 62 ಎಐ ಕ್ಯಾಮರಗಳನ್ನು ಅಳವಡಿಸಲಾಗಿದೆ. ಇದೇ ತಿಂಗಳ ಕೊನೆಯ ವಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಈ ಪಾರ್ಕಿಂಗ್ ಸ್ಥಳವನ್ನು ಉದ್ಘಾಟನೆ ನಡೆಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ಕೆ.ಆರ್ ಮಾರುಕಟ್ಟೆ ಪಾರ್ಕಿಂಗ್ ಲಾಟ್ ಉದ್ಘಾಟನೆ ಆದರೆ ಕೆಆರ್ ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯೋ ಸಾಧ್ಯತೆ ಇದೆ ಎಂದು ಸ್ಥಳೀಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ರಷ್ಯಾ ತೈಲಕ್ಕೆ ಭಾರತ ಗುಡ್-ಬೈ | ಭಾರತಕ್ಕೆ ಶೇ.25 ಹೆಚ್ಚುವರಿ ಸುಂಕದಿಂದ ಮುಕ್ತಿ ನೀಡಿದ ಟ್ರಂಪ್!



















