ಪ್ರಮುಖವಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳ ಒಳಗೆ ನಿಲ್ಲಿಸುವಂತಗೆ ಏಪ್ರಿಲ್ 2, 2025ರಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ತೀರ್ಪು ಓಲಾ, ಉಬರ್, ರ‍್ಯಾಪಿಡೋ ಮುಂತಾದ ಬೈಕ್ ಟ್ಯಾಕ್ಸಿ ಸೇವಾದಾರರಿಗೆ ದೊಡ್ಡ ಹೊಡೆತ ನೀಡಿದೆ. ರಾಜ್ಯ ಸರ್ಕಾರವು ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 3ರ ಅಡಿಯಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅನುಮತಿ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳ ಪ್ರಕಾರ, ಬಿಳಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳನ್ನು ವಾಣಿಜ್ಯ ಕಾರ್ಯಾಚರಣೆಗೆ ಬಳಸುವಂತಿಲ್ಲ. ಈ ಹಿನ್ನೆಲೆಯಲ್ಲಿ, ರ‍್ಯಾಪಿಡೋ, ಓಲಾ ಮತ್ತು ಉಬರ್ ಸೇರಿದಂತೆ ಕೆಲವು ಸಂಸ್ಥೆಗಳು ತಮ್ಮ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಸಾರಿಗೆ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಆ ಎಲ್ಲ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಲಯದ ತೀರ್ಪು
ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರು ಈ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದ್ದು. ರಾಜ್ಯ ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಮತ್ತು ನಿಬಂಧನೆಗಳನ್ನು ರೂಪಿಸುವಂತೆ ಸೂಚಿಸಲಾಗಿದೆ. ಅಲ್ಲಿಯವರೆಗೆ, ಆರು ವಾರಗಳ ಒಳಗೆ ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಎಲ್ಲಾ ಬೈಕ್ ಟ್ಯಾಕ್ಸಿ ಸಂಗ್ರಾಹಕರು ತಮ್ಮ ಕಾರ್ಯಾಚರಣೆ ನಿಲ್ಲಿಸಬೇಕು ಎಂದು ಆದೇಶಿಸಿದೆ
ಬೈಕ್ ಟ್ಯಾಕ್ಸಿ ಸಂಗ್ರಾಹಕರಿಗೆ ಆಘಾತ
ಈ ತೀರ್ಪು ರ‍್ಯಾಪಿಡೋ, ಓಲಾ, ಉಬರ್ ಮುಂತಾದ ಸಂಸ್ಥೆಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಈ ಸಂಸ್ಥೆಗಳು ರಾಜ್ಯದಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸುವ ಯೋಜನೆಯಲ್ಲಿದ್ದವು. ಉದಾಹರಣೆಗೆ, ರ‍್ಯಾಪಿಡೋ ತನ್ನ “ಬೈಕ್ ಪಿಂಕ್” ಎಂಬ ಮಹಿಳೆಯರಿಗೆ ಮಾತ್ರ ಸೀಮಿತವಾದ ಸೇವೆಯನ್ನು 2025ರ ಅಂತ್ಯದ ವೇಳೆಗೆ ಪ್ರಾರಂಭಿಸುವ ಉದ್ದೇಶ ಹೊಂದಿತ್ತು. ಆದರೆ, ಈ ಆದೇಶದಿಂದ ಆ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.
ಸಾರಿಗೆ ಒಕ್ಕೂಟದ ಸಂತಸ
ಸಾರಿಗೆ ಒಕ್ಕೂಟವು ಈ ಆದೇಶವನ್ನು ಸ್ವಾಗತಿಸಿದೆ. ಒಕ್ಕೂಟವು ಬೈಕ್ ಟ್ಯಾಕ್ಸಿಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ಧಕ್ಕೆ ತರುತ್ತವೆ ಎಂದು ದೀರ್ಘಕಾಲದಿಂದ ಆರೋಪಿಸುತ್ತಾ ಬಂದಿತ್ತು.
ಜನರ ಮೇಲೆ ಪರಿಣಾಮ
ಬೆಂಗಳೂರಿನಂತಹ ನಗರಗಳಲ್ಲಿ ಬೈಕ್ ಟ್ಯಾಕ್ಸಿಗಳು ಟ್ರಾಫಿಕ್ ದಟ್ಟಣೆಯ ಮಧ್ಯೆ ಜನರಿಗೆ ತ್ವರಿತ ಮತ್ತು ಕಡಿಮೆ ವೆಚ್ಚದ ಸಾರಿಗೆ ಆಯ್ಕೆಯಾಗಿ ಜನಪ್ರಿಯವಾಗಿದ್ದವು. ಈ ಸೇವೆಗಳ ಸ್ಥಗಿತದಿಂದ ಜನರು ಪರ್ಯಾಯ ಸಾರಿಗೆ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ.