ಬೆಂಗಳೂರು: ಬಿ.ಶ್ರೀರಾಮುಲು ಅವರ ದೆಹಲಿ ಭೇಟಿ ಸದ್ಯಕ್ಕೆ ಬೇಡವೆಂದು ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ, ಅವರೇ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಯಾವುದೇ ಹೊಸ ಗೊಂದಲಗಳು ಬೇಡ ಎಂಬುವುದನ್ನು ಅರಿತು ಶ್ರೀರಾಮುಲು ಅವರಿಗೆ ದೆಹಲಿಗೆ ಬರಬೇಡಿ ಎಂದು ಸೂಚಿಸಿದ್ದಾರೆ.
ಈಗಾಗಲೇ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮೇಲೆ ಅಸಮಾಧಾನಗೊಂಡಿರುವ ರಾಮುಲು, ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ನೀಡಲು ಮುಂದಾಗಿದ್ದರು. ಜೊತೆಗೆ ಅವಕಾಶ ಕೊಟ್ಟರೇ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸಲು ಸಿದ್ಧ ಎಂಬ ಸಂದೇಶ ರವಾನೆ ಮಾಡಿದ್ದರು. ಆದರೆ, ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಹೈಕಮಾಂಡ್ ನಾಯಕರು ಸದ್ಯಕ್ಕೆ ನೀವು ದೆಹಲಿಗೆ ಬರುವುದು ಬೇಡ ಎಂಬ ಸಂದೇಶವನ್ನು ರವಾನಿಸಿದ್ದಾರೆ.