ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಇತ್ತೀಚೆಗೆ ವಾಹನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ, ಟಾಟಾ ಮೋಟಾರ್ಸ್ ತನ್ನ ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದೆ. ಈ ಮೂಲಕ, ಜಿಎಸ್‌ಟಿ ಇಳಿಕೆಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದ ಮೊದಲ ಪ್ರಮುಖ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೊಸ ಪರಿಷ್ಕೃತ ದರಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದ್ದು, ಮುಂಬರುವ ಹಬ್ಬದ ಋತುವಿನಲ್ಲಿ ಕಾರು ಖರೀದಿಸುವವರಿಗೆ ಇದು ಸಿಹಿ ಸುದ್ದಿಯಾಗಿದೆ.
ಜಿಎಸ್‌ಟಿ ಸುಧಾರಣೆಯ ಪರಿಣಾಮ:
ಇತ್ತೀಚೆಗೆ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಸಣ್ಣ ಕಾರುಗಳು, 350cc ಗಿಂತ ಕಡಿಮೆ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳು, ಮತ್ತು ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯನ್ನು 28% ರಿಂದ 18% ಕ್ಕೆ ಇಳಿಸಲಾಗಿತ್ತು. ಈ ಕ್ರಮದಿಂದಾಗಿ, ಎಂಟ್ರಿ-ಲೆವೆಲ್ ಕಾರುಗಳ ಬೆಲೆಯು ಸುಮಾರು 10% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಟಾಟಾ ಕಾರುಗಳ ಬೆಲೆ ಎಷ್ಟು ಕಡಿಮೆಯಾಗಲಿದೆ?
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಮಾದರಿಗಳ ಮೇಲೆ ಈ ಕೆಳಗಿನಂತೆ ಬೆಲೆ ಇಳಿಕೆಯನ್ನು ಘೋಷಿಸಿದೆ
- ಟಾಟಾ ನೆಕ್ಸಾನ್: 1.55 ಲಕ್ಷ ರೂ.ವರೆಗೆ .
- ಟಾಟಾ ಸಫಾರಿ: 1.45 ಲಕ್ಷ ರೂ.ವರೆಗೆ .
- ಟಾಟಾ ಹ್ಯಾರಿಯರ್: 1.40 ಲಕ್ಷ ರೂ.ವರೆಗೆ
- ಟಾಟಾ ಆಲ್ಟ್ರೋಜ್: 1.10 ಲಕ್ಷ ರೂ.ವರೆಗೆ
- ಟಾಟಾ ಪಂಚ್: 85,000 ರೂ. ವರೆಗೆ
- ಟಾಟಾ ಟಿಗೋರ್: 80,000 ದವರೆಗೆ
- ಟಾಟಾ ಟಿಯಾಗೋ: 75,000 ರೂ. ವರೆಗೆ
- ಟಾಟಾ ಕರ್ವ್: 65,000 ರೂ.ವರೆಗೆ
ಟಾಟಾ ಮೋಟಾರ್ಸ್ ಹೇಳಿದ್ದೇನು?
“ಪ್ರಯಾಣಿಕ ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯು, ದೇಶದ ಲಕ್ಷಾಂತರ ಜನರಿಗೆ ವೈಯಕ್ತಿಕ ವಾಹನ ಹೊಂದುವ ಕನಸನ್ನು ನನಸು ಮಾಡಲು ಸಹಾಯ ಮಾಡುವ ಒಂದು ಪ್ರಗತಿಪರ ನಿರ್ಧಾರವಾಗಿದೆ. ನಮ್ಮ ‘ಗ್ರಾಹಕನೇ ಮೊದಲು’ ಎಂಬ ತತ್ವಕ್ಕೆ ಬದ್ಧರಾಗಿ, ನಾವು ಈ ಸುಧಾರಣೆಯ ಸಂಪೂರ್ಣ ಲಾಭವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ,” ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.



















