ಬೆಂಗಳೂರು: ಮಾಲಿವುಡ್ ನಲ್ಲಿ ಹೇಮಾ ವರದಿ ದೊಡ್ಡ ಅಲೆಯನ್ನೇ ಸೃಷ್ಟಿಸಿತ್ತು. ಈಗ ಈ ಅಲೆ ಸ್ಯಾಂಡಲ್ ವುಡ್ ಗೂ ಅಪ್ಪಳಿಸಿದ್ದು, ಅದೇ ಮಾದರಿಯ ಸಮಿತಿ ರಚನೆಯಾಗಬೇಕೆಂದು ಹಲವರು ಮನವಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ. 16ರಂದು ಫಿಲ್ಮ್ ಚೇಂಬರ್ ನಲ್ಲಿ ಮಹತ್ವ ಸಭೆ ನಡೆಯಲಿದೆ.
ಫಿಲ್ಮ್ ಚೇಂಬರ್ ಗೆ ಮಹಿಳಾ ಅಯೋಗದ ಪತ್ರದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಗೆ ಮುಂದಾಗಿದೆ. ಅಲ್ಲದೇ ಸಭೆಯ ಕುರಿತು ನಟಿಯರಿಗೆ ಮಾಹಿತಿ ನೀಡಿದೆ. ನಾಳೆ 11 ಗಂಟೆಗೆ ಫಿಲ್ಮ್ ಚೇಂಬರ್ನಲ್ಲಿ ಸಭೆ ನಡೆಯಲಿದ್ದು, ಮಹಿಳಾ ಅಯೋಗದ ಅಧ್ಯಕ್ಷೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಫೈರ್ ಸದಸ್ಯರೊಂದಿಗೆ ಬೇರೆ ನಟಿಯರು ಕೂಡ ಸಭೆಗೆ ಹಾಜರಾಗುವ ಸಾಧ್ಯತೆ ಇದೆ. ಹೇಮಾ ಕಮಿಟಿಯಂತೆ ಸ್ಯಾಂಡಲ್ ವುಡ್ ನಲ್ಲಿಯೂ ರಚಿಸಲು ಈಗ ಪರ -ವಿರೋಧ ಚರ್ಚೆಗಳು ಶುರುವಾಗಿವೆ. ಹೇಮಾ ವರಧಿ ಬಂದ ಮೇಲೆ ಮಲೆಯಾಳಂ ಚಿತ್ರರಂಗದಲ್ಲಿ ಹಲವಾರು ಕರಾಳ ಮುಖಗಳು ಬಯಲಿಗೆ ಬಂದಿದ್ದರು. ಕಾಮುಕ ಕಣ್ಣುಗಳನ್ನು ಚಂದನವನದಿಂದಲೂ ಹೊರ ಹಾಕೋಕೆ ಹೇಮಾ ರೀತಿಯ ಸಮಿತಿ ರಚನೆಯಾಗಬೇಕೆಂದು ಹಲವರು ಪಟ್ಟು ಹಿಡಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಚಿತ್ರರಂಗದ ನಟಿಯರನ್ನು ಕರೆದು ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸಿ ತೀರ್ಮಾನ ತೆಗೆದುಕೊಳ್ಳಿ ಈ ಸಭೆ ಸೆಪ್ಟೆಂಬರ್ 13ರ ಒಳಗೆ ನಡೆಸುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದರು. ಈಗ ನಾಳೆಯ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆಯೋ ಕಾಯ್ದು ನೋಡಬೇಕಿದೆ.