ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಜಕ್ಕಲಮಡುಗು ಜಲಾಶಯಕ್ಕೆ ಬಾಗಿನ ಅರ್ಪಿಸುವುದಕ್ಕಾಗಿ ಸಂಸದ ಸುಧಾಕರ್ ತೆರಳುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ಹುಳುಗಳು ದಾಳಿ ನಡೆಸಿದ್ದು , ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರಸಭಾ ಸದಸ್ಯರು ಸೇರಿದಂತೆ ಹಲವರು ದಾಳಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಜಕ್ಕಲಮಡುಗು ಜಲಾಶಯ ಕೋಡಿ ಹರಿದಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೆರಳಿ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಿಸಿದ್ದರು. ಆನಂತರ ಸಂಸದ ಸಧಾಕರ್ ಸಹ ಬಾಗಿನ ಅರ್ಪಣೆಗೆ ಸಮಯ ನಿಗದಿ ಮಾಡಿದ್ದರು. ಆದರೆ, ರಾಹುಕಾಲ ಸಮಯ ಸರಿ ಇಲ್ಲ ಅಂತ ಹಾಗೂ ವಿವಿಧ ಕಾರ್ಯಕ್ರಮಗಳ ಒತ್ತಡದಿಂದ ಸಂಜೆ 4ಕ್ಕೆ ಕಾರ್ಯಕ್ರಮದ ಸಮಯ ನಿಗದಿ ಮಾಡಿಕೊಳ್ಳಲಾಗಿತ್ತು.
ಹೀಗಾಗಿ ಸಂಸದ ಸುಧಾಕರ್ ಸಹ ಬಾಗಿನ ಅರ್ಪಣೆಗೆ ಜಲಾಶಯದ ಹತ್ತಿರ ಬಂದಿದ್ದರು. ಆದರೆ, ಈ ವೇಳೆ ಹೆಜ್ಜೇನು ದಾಳಿ ಮಾಡಿದೆ. ಅರ್ಚಕರು, ಅಧಿಕಾರಿಗಳು ಸೇರಿದಂತೆ, ಸಂಸದ ಸುಧಾಕರ್ ಬೆಂಬಲಿತರು, ನಗರಸಭಾ ಸದಸ್ಯರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ನಂತರ ಕಾರ್ಯಕ್ರಮ ರದ್ದು ಮಾಡಲಾಯಿತು.