ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ರಾಜ್ಯಕ್ಕೆ ಸಾತಾರಾ ಜಿಲ್ಲೆಯ ಕೊಯಿನಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ರಾಧಾನಗರ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.

ಈಗಾಗಲೇ ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿ ತೀರದಲ್ಲಿ ಆತಂಕ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ, ಅಥಣಿ ತಾಲೂಕಿನ ನದಿ ತೀರದ ಜನರಿಗೆ ಈಗಾಗಲೇ ಜಿಲ್ಲಾಡಳಿತ ಅಲರ್ಟ್ ಘೋಷಿಸಿದ್ದು, ನದಿಗೆ ಇಳಿಯದಂತೆ ಸೂಚನೆ ನೀಡಿದೆ.



















