ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆಯಿಂದ ರಭಸ ಗಾಳಿ, ಗುಡುಗು, ಸಿಡಿಲು ಸಹಿತ ವ್ಯಾಪಕ ಮಳೆ ಸುರಿದಿದೆ. ಹೀಗಾಗಿ ಜನ – ಜೀವನ ಅಲ್ಲಲ್ಲಿ ಅಸ್ತವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಂಗೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಭೇಟಿ ನೀಡಿದ್ದಾರೆ.
ಕೇಂದ್ರ ಕಚೇರಿಯಲ್ಲಿರುವ ಕಂಟ್ರೋಲ್ ರೂಮ್ ಗೆ & ICCC ಗೆ ಮಹೇಶ್ವರ್ ರಾವ್ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಲಯ ಆಯುಕ್ತರು, ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪರಿಸ್ಥಿತಿ ಬಗ್ಗೆ ತಿಳಿದುಕೊಂಡು ಸಲಹೆ ನೀಡಿದ್ದಾರೆ.
ಮುಂಜಾಗೃತ ಕ್ರಮ ವಹಿಸುವಂತೆ ಹಾಗೂ ಮರಗಳು, ರೆಂಬೆ, ಕೊಂಬೆಗಳನ್ನು ತುರ್ತಾಗಿ ತೆರವುಗೊಳಿಸುವಂತೆ, ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಳೆಯಿಂದಾಗಿ ಶುಕ್ರವಾರ ಹಲವೆಡೆ ಅವಾಂತರಗಳು ಕೂಡ ನಡೆದಿವೆ. ಸರ್ಜಾಪುರದ ಸೋಂಪುರ ಗೇಟ್ ಬಳಿ ಬೃಹತ್ ಹೋರ್ಡಿಂಗ್ಸ್ ಗಾಳಿಗೆ ಬಿದ್ದಿದೆ. ಹೋಟೆಲ್, ಚಾಟ್ಸ್ ಅಂಗಡಿ ಮೇಲೆ ಹೋರ್ಡಿಂಗ್ಸ್ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಅಂಚೆಪಾಳ್ಯದ ಪ್ರೆಸ್ಟೀಜ್ ಜಿಂದಾಲ್ ಅಪಾರ್ಟ್ಮೆಂಟ್ ಸುತ್ತ ಗಾಳಿ ಸಹಿತ ಮಳೆಯಾಗಿದೆ.
ಮಳೆಯ ಅಬ್ಬರಕ್ಕೆ ಮರದ ರೆಂಬೆ, ಕೊಂಬೆಗಳು ನೆಲಕ್ಕೆ ಉರುಳಿವೆ. ಶೇಷಾದ್ರಿಪುರಂ ಬಳಿ ರಸ್ತೆ ಮೇಲೆ ದೊಡ್ಡ ಕೊಂಬೆ ಬಿದ್ದು ಕೆಲಕಾಲ ವಾಹನ ಸವಾರರು ಪರದಾಡುವಂತಾಗಿತ್ತು. ರಸ್ತೆ ಬದಿ ನಿಲ್ಲಿಸಿದ ಕಾರಿನ ಮೇಲೆ ಬಿದ್ದ ಮರದ ಕೊಂಬೆ ಬಿದ್ದಿದೆ. ಹಲವೆಡೆ ತಗ್ಗು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತು ಜನ ಪರದಾಟ ನಡೆಸುವಂತಾಗಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.



















