ಲಕ್ನೋ: ಮುಂಗಾರು ಚುರುಕುಗೊಂಡ ಪರಿಣಾಮ ಹವಾಮಾನ ಪರಿಸ್ಥಿತಿ ತಲೆಕೆಳಗಾಗಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಹೆಚ್ಚಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾಗಿ, ಯುಪಿಯ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಮುಖ್ಯವಾಗಿ ಸಂಗಮ್ ನಗರ ಎಂದೇ ಕರೆಯಲ್ಪಡುವ ಹಾಗೂ ಮಹಾ ಕುಂಭಮೇಳ ನಡೆದ ಪ್ರಯಾಗ್‌ರಾಜ್‌ನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೇ ವಾರಣಾಸಿ ಸೇರಿದಂತೆ ಅನೇಕ ನಗರಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ.
“17 ಜಿಲ್ಲೆಗಳಲ್ಲಿ ಪ್ರವಾಹ”
ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಗಂಗಾ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಪ್ರಯಾಗ್‌ರಾಜ್ ನಗರದ ಸಲೋರಿ, ರಾಜಪುರ, ದಾರಗಂಜ್, ಬಘಾಡಾ ಮುಂತಾದ ಪ್ರದೇಶಗಳು ಮುಳುಗಿಹೋಗಿವೆ. ಅದೇ ಸಮಯದಲ್ಲಿ, ಮಿರ್ಜಾಪುರ, ವಾರಣಾಸಿ, ಅಯೋಧ್ಯೆ, ಚಂದೌಲಿ, ಬಲ್ಲಿಯಾದ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಅಷ್ಟಲ್ಲದೇ ಲಕ್ನೋ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್, ಬಹ್ರೈಚ್ ಮತ್ತು ಅಂಬೇಡ್ಕರ್ ನಗರದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
“ಪ್ರಯಾಗ್‌ರಾಜ್ ಪರಿಸ್ಥಿತಿ ಅಧೋಗತಿ”
ಪ್ರಯಾಗ್‌ರಾಜ್‌ನಲ್ಲಿ ಗಂಗಾ-ಯಮುನಾ ಸಂಗಮದ ಬಳಿಕ ಬರುವ ಪ್ರದೇಶಗಳು ಕೆಟ್ಟ ಸ್ಥಿತಿಯಲ್ಲಿವೆ. ಉಕ್ಕಿದ ಗಂಗೆ, ಯಮುನೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ತಂಡಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಉಳಿದಂತೆ ಜನರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ.



















