ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮೇಘಸ್ಫೋಟವಾಗಿದೆ. ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಯಿಂದ ನಗರ ಸಂಪೂರ್ಣ ಜಲಾವೃತವಾಗಿದೆ. ವರ್ಲಿ, ಬಾಂದ್ರಾ, ಕುರ್ಲಾ, ಅಂಧೇರಿ ಸೇರಿದಂತೆ ಎಲ್ಲ ಪ್ರಮುಖ ಪ್ರದೇಶಗಳಲ್ಲೂ ರಣ ಮಳೆ ಸುರಿಯುತ್ತಿದೆ. ಹಲವೆಡೆ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಪ್ರತಿಷ್ಠಿತ ಛತ್ರಪತಿ ಶಿವಾಜಿ ಟರ್ಮಿನಸ್ ರಸ್ತೆ ಸಂಪೂರ್ಣ ಮುಳುಗಿದ್ದು, ಕೆಲ ವಾಹನಗಳು ನೀರನಲ್ಲಿ ಮುಳುಗಿವೆ. ಇನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಕೆಲ ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ. ಕೆಲವೆಡೆ ಲೋಕಲ್ ಟ್ರೈನ್ ನ ಟ್ರಾಕ್ ಗಳು ಮುಳುಗಿದ್ದು, ನಿಧಾನಗತಿಯ ಸಂಚಾರ ಮುಂದುವರಿದಿದೆ.



















