ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಇಂದು ಕೂಡ ಕರಾವಳಿ ಕರ್ನಾಟಕಕ್ಕೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆ ಮುಂದುವರಿಯುವುದರಿಂದ ನಿವಾಸಿಗಳು ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ.
ಭಾರೀ ಮಳೆಯಿಂದ ಜಲಾಶಯಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ಕೆ.ಆರ್.ಎಸ್. ಮತ್ತು ಕಬಿನಿ ಜಲಾಶಯಗಳು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಅಪಾಯ ಮೀರಿದೆ. ಅಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮೈಸೂರಿನ ಹೆಚ್.ಡಿ ಕೋಟೆಯ ತಾರಕ ಜಲಾಶಯ ತುಂಬಿ ಹರಿಯುತ್ತಿದೆ. ಮನೆ, ಜಮೀನುಗಳಿಗೆ ನೀರು ನುಗ್ಗಿದೆ. ಮನೆಯಿಂದ ಜನ ಹೊರ ಬರಲಾಗದೆ ಪರದಾಟ ನಡೆಸುತ್ತಿದ್ದಾರೆ.
ಇನ್ನು, ಭಾರೀ ಮಳೆಯಿಂದ ಹಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ವಾಹನ ಸವಾರರು ಓಡಾಟ ನಡೆಸಲು ಪರದಾಡುತ್ತಿದ್ದಾರೆ. ಸೇತುಯ ಇಲ್ಲದೇ ಬೇರೆ ಬೇರೆ ಊರುಗಳ ಮೂಲಕ ಮನೆ ತಲುಪುತ್ತಿದ್ದಾರೆ.

ಗುಡ್ಡಗಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಗುಡ್ಡಗಾಡು ಜಿಲ್ಲೆಗಳಲ್ಲಿ ಚದುರಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ಕೆಲವು ದಿನಗಳವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ನಿರಂತರ ಮಳೆಯಿಂದಾಗಿ ನಗರದ ಹಲವಾರು ಭಾಗಗಳಲ್ಲಿ ನೀರು ನಿಲ್ಲುವುದು ಮತ್ತು ವಿದ್ಯುತ್ ಕಡಿತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.
ಬೆಂಗಳೂರಲ್ಲಿ ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಎಂದು ಲೆಕ್ಕಹಾಕಲಾಗಿದ್ದರೂ, ಕನಿಷ್ಠ ತಾಪಮಾನವು 19 ಡಿಗ್ರಿ ಸೆಲ್ಸಿಯಸ್ ಸುತ್ತಲೂ ಉಳಿಯುವ ನಿರೀಕ್ಷೆಯಿದೆ. ಮುಂದಿನ ಕೆಲವು ದಿನಗಳವರೆಗೆ ಹಲವಾರು ಪ್ರಮುಖ ಪ್ರದೇಶಗಳಲ್ಲಿ ನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.