ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಶುಷ್ಕ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗಗಳಲ್ಲಿ ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು, ಹೀಟ್ ವೇವ್ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಭಾಗಗಳಲ್ಲಿ ಬಿಸಿ ಹಾಗೂ ಒಣ ಹವಾಮಾನ ಕಾಣಿಸಿಕೊಳ್ಳಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೂಡ ಶುಷ್ಕ ವಾತಾವರಣ ಮುಂದುವರಿಯಲಿದೆ.
ಇನ್ನೊಂದೆಡೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಪ್ರದೇಶಗಳಲ್ಲಿ ಒಣ ಹವಾಮಾನ ಇರಲಿದೆ.
ಉಷ್ಣಾಘಾತದಿಂದ ರಕ್ಷಣೆಗಾಗಿ ಸಲಹೆಗಳು:
ಆರೋಗ್ಯ ಇಲಾಖೆ ನಾಗರಿಕರಿಗೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ನೇರ ಸೂರ್ಯಪ್ರಕಾಶದಿಂದ ದೂರವಿರಿ. ನಿಯಮಿತವಾಗಿ ನೀರು ಕುಡಿಯಬೇಕು. ಎಳನೀರು, ಮಜ್ಜಿಗೆ ಹಾಗೂ ಹಣ್ಣಿನ ರಸಗಳನ್ನು ಸೇವಿಸುವುದು ಉತ್ತಮ. ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಬಳಸಿ.
ಕಾಫಿ, ಟೀ ಹಾಗೂ ಹೆಚ್ಚು ಸಕ್ಕರೆ ಇರುವ ಪಾನೀಯಗಳನ್ನು ಕಡಿಮೆ ಸೇವಿಸುವುದು ಒಳಿತು, ಏಕೆಂದರೆ ಇವು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು. ಹವಾಮಾನ ಇಲಾಖೆಯ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು ಎಚ್ಚರಿಕೆಯಿಂದ ಇರಲು ಮನವಿ ಮಾಡಲಾಗಿದೆ.



















