ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಳವಾಗುತ್ತಿದ್ದು, ಹೀಟ್ ಸ್ಟ್ರೋಕ್ ಅಪಾಯ ಶುರುವಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಪ್ರಭಾವ ಹೆಚ್ಚಾಗುತ್ತಿದೆ. ಫೆಬ್ರವರಿ ತಿಂಗಳಲ್ಲೇ ಬಹುತೇಕ ಜಿಲ್ಲೆಗಳಲ್ಲಿ 36 ಡಿ.ಸೆ ಉಷ್ಣಾಂಶ ದಾಖಲಾಗುತ್ತಿದೆ. ಹೀಗಾಗಿ ಹೆಚ್ಚಿನ ಬಿಸಿಲ ತಾಪದಿಂದ ಜನರ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರುತ್ತಿವೆ.
ಹೀಟ್ ಸ್ಟ್ರೋಕ್ ನಿಂದಾಗಿ ಮೆದುಳಿನ ಚಟುವಟಿಕೆಯಲ್ಲಿ ಅಡಚಣೆ ಉಂಟಾಗಿ ಮನುಷ್ಯ ಕೋಮಾಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದಷ್ಟು ಬಿಸಿಲಲ್ಲಿ ಕೆಲಸ ಮಾಡುವವರು ಆರೋಗ್ಯದ ಮೇಲೆ ಗಮನ ಹರಿಸಬೇಕು. ಹೆಚ್ಚಾಗಿ ನೀರು ಹಾಗೂ ನೀರಿನಾಂಶ ಇರುವ ಆಹಾರ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಅತಿಯಾದ ಸುಸ್ತು, ತಲೆತಿರುಗುವಿಕೆ, ದೃಷ್ಟಿ ಮಂದ, ಮಾತಿನ ಗೊಂದಲ, ಮೈ ಮೇಲೆ ಕೆಂಪು ಗುಳ್ಳೆ, ವೇಗದ ಹೃದಯ ಬಡಿತ ಸೇರಿದಂತೆ ಕೆಲವು ತೊಂದರೆಗಳು ಹೀಟ್ ನಿಂದಾಗಿ ಸಂಭವಿಸುತ್ತವೆ. ಹೀಗಾಗಿ ಕಟ್ಟಡ ಕಾರ್ಮಿಕರು, ಹೊಲದಲ್ಲಿ ಕೆಲಸ ಮಾಡುವ ರೈತರು, ಅಗ್ನಿಶಾಮಕ ದಳದವರು, ಮಿಲಿಟರಿ ಸದಸ್ಯರು, ಕ್ರೀಡಾಪಟುಗಳು, 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಹಾರ್ಟ್ ಪೇಷೆಂಟ್, ವೈರಲ್ ಫೀವರ್ ಇದ್ದವರು ಹೀಟ್ ಸ್ಟ್ರೋಕ್ ನಿಂದ ಹುಷಾರಾಗಿರಬೇಕು ಎಂದು ವೈದ್ಯ ಡಾ. ಎಂ.ಕೌಸರ್ ಸಲಹೆ ನೀಡಿದ್ದಾರೆ.