ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದ ವೇಳೆ ಹಿರಿಯ ವಕೀಲ ನಿಂಗಪ್ಪ ಸುದ್ದಿ (48) ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ನಿವಾಸಿಯಾಗಿದ್ದ ನಿಂಗಪ್ಪ ಸುದ್ದಿ, ಕುಷ್ಟಗಿ ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದರು. ಇಂದು ಬೆಳಗಿನ ಜಾವ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದ ವೇಳೆ ನಿಂಗಪ್ಪ ಅವರಿಗೆ ಏಕಾಏಕಿ ಅಸ್ವಸ್ಥತೆ ಉಂಟಾಗಿ ನ್ಯಾಯಾಲಯದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅಲ್ಲಿದ್ದವರು ಅವರನ್ನು ಕುಷ್ಟಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೆ ವಕೀಲ ನಿಂಗಪ್ಪ ಮೃತಪಟ್ಟಿದ್ದಾರೆ. ಈ ಹಿಂದೆ ಕೂಡ ನಿಂಗಪ್ಪ ಅವರಿಗೆ ಹೃದಯಾಘಾತವಾಗಿದ್ದು, ವೈದ್ಯರು ಸ್ಟಂಟ್ ಅಳವಡಿಕೆ ಮಾಡಿದ್ದರು ಎನ್ನಲಾಗಿದೆ. ಇಂದು ಮತ್ತೆ ಹೃದಯಾಘಾತ ಸಂಭವಿಸಿ ದುರ್ಘಟನೆ ನಡೆದಿದೆ.
ಹೃದಯಾಘಾತದಿಂದ ಮೃತಪಟ್ಟಿರುವ ಈ ಪ್ರಕರಣ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ವಕೀಲರ ವಲಯದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ಪೊಲೀಸ್ ಪೇದೆ ಹೆಸರೇಳಿ ಡ್ರಗ್ ಪೆಡ್ಲರ್ ಆತ್ಮಹತ್ಯೆಗೆ ಯತ್ನ!


















