ಜೈಪುರ: ಶಾಲೆಯಲ್ಲಿಯೇ 16 ವರ್ಷದ ಬಾಲಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ರಾಜಸ್ಥಾನದ ದೌಸಾದ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಶಾಲೆಯ ಕಾರಿಡಾರ್‌ನಲ್ಲಿ ಹಠಾತ್ ಆಗಿ ಪ್ರಜ್ಞೆ ತಪ್ಪಿ ಬಿದ್ದು ದುರಂತ ಸಾವನ್ನಪ್ಪಿದ್ದಾನೆ. ಆ ವಿದ್ಯಾರ್ಥಿ ಮಾರಣಾಂತಿಕ ಹೃದಯಾಘಾತದಿಂದ ಬಳಲುತ್ತಿದ್ದ ಎಂದು ವರದಿಗಳು ತಿಳಿಸಿವೆ. ಈ ಘಟನೆ ಶಾಲೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಆ ಹುಡುಗನು ತನ್ನ ಬ್ಯಾಗ್ ಅನ್ನು ಭುಜದ ಮೇಲೆ ತೂಗುಹಾಕಿಕೊಂಡು ನಡೆಯುತ್ತಿದ್ದಾಗ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ಆಗ ಅಕ್ಕಪಕ್ಕದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಓಡಿಹೋಗಿ ಆತನ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತನ ಪ್ರಾಣ ಹೋಗಿತ್ತು.
ವಿದ್ಯಾರ್ಥಿಯ ಅಕಾಲಿಕ ಮರಣದ ಸುದ್ದಿ ಸ್ಥಳೀಯರಲ್ಲಿ ಬೇಸರ ಮೂಡಿಸಿದ್ದು, ಚಿಕ್ಕ ವಯಸ್ಸಿನಲ್ಲೇ ಬಾಲಕ ಸಾವನ್ನಪ್ಪಿರುವುದು ಆಘಾತ ಮೂಡಿಸಿದೆ. ಅವನ ಕುಟುಂಬವು ಮರಣೋತ್ತರ ಪರೀಕ್ಷೆಯನ್ನು ನಿರಾಕರಿಸಿದೆ ಎಂದು ವರದಿಯಾಗಿದೆ.
ಶಾಲೆಯ ಆಡಳಿತ ಮಂಡಳಿ ಆ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಈ ಘಟನೆಯ ತನಿಖೆಗೆ ಅಧಿಕಾರಿಗಳೊಂದಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.