ಬೆಂಗಳೂರು : ಹಿರಿಯ ನಿರ್ದೇಶಕ ಜೋ ಸೈಮನ್(80) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಫಿಲ್ಮ್ ಚೇಂಬರ್‌ನಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜೋ ಸೈಮನ್ ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ಬಳಿಕ ಜೋ ಸೈಮನ್ ಅವರು ವಾಶ್ ರೂಮ್‌ಗೆ ಹೋಗಿದ್ದರು. ಈ ವೇಳೆ ವಾಂತಿ ಮಾಡಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೋ ಸೈಮನ್ ಕೊನೆಯುಸಿರೆಳೆದಿದ್ದಾರೆ. ವಿಷ್ಣುವರ್ಧನ್ ಅಭಿನಯದ ಸಾಹಸಸಿಂಹ ಚಿತ್ರದ ನಿರ್ದೇಶಕರಾಗಿದ್ದ ಜೋ ಸೈಮನ್ ಸಿಂಹದ ಜೋಡಿ, ನನ್ನ ರೋಷ ನೂರು ವರುಷ, ಮಹಾ ಪ್ರಚಂಡರು, ಸಾಹಸಸಿಂಹ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು.
ಮಂಡ್ಯ ಮೂಲದ ಜೋ ಸೈಮನ್, 1978ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಆರಂಭದಲ್ಲಿ ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದ್ದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆ.ಎಸ್.ಆರ್.ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಕರ್ನಾಟಕ ಚಾಲನಚಿತ್ರ ಅಕಾಡೆಮಿ ಜೋ ಸೈಮನ್ ಅವರ ಜೀವಿತಾವಧಿ ಸಾಧನೆ ಗುರುತಿಸಿ 2013ರಲ್ಲಿ ಬಿ.ಆರ್.ಪಂತುಲು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ : ‘ನಮ್ಮನ್ನೂ ಬೆಳೆಸಿ, ಅನುದಾನ ಹೆಚ್ಚಿಸಿ’ | ಜಯ್ ಶಾಗೆ ಅಮೆರಿಕ ಕ್ರಿಕೆಟಿಗ ಶಯಾನ್ ಜಹಾಂಗೀರ್ ಮನವಿ



















