ಸಾಕಿದ ನಾಯಿಯ ಸಾವಿನ ಸುದ್ದಿ ಕೇಳಿ ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಾದನಾಯಕನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಬೆಂಗಳೂರು ಉತ್ತರದ ಹೆಗ್ಗಡದೇವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜಶೇಖರ (34) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ರಾಜಶೇಖರ್ ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡಿಕೊಂಡು ಪಾರ್ಟ್ ಟೈಮ್ ಆಗಿ ಸಿನಿಮಾಗಳಿಗೆ ಚಿತ್ರಕಥೆ ಬರೆಯುತ್ತಿದ್ದರು.
ಮನೆಯಲ್ಲಿ ಜರ್ಮನ್ ಶೆಪರ್ಡ್- ಬ್ರಿಡ್ ನಾಯಿ ಸಾಕಿದ್ದರು. ಆ ನಾಯಿಯೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿಕೊಂಡಿದ್ದರು. ಕಳೆದ 9 ವರ್ಷಗಳಿಂದ ನಾಯಿಯನ್ನು ಸಾಕಿದ್ದರು. ಆದರೆ, ಮಂಗಳವಾರ ರಾತ್ರಿ ಆ ಸಾಕಿದ ನಾಯಿ ಸಾವನ್ನಪ್ಪಿತ್ತು. ಇದರಿಂದ ಮನನೊಂದ ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಕಿದ ನಾಯಿಗೆ ತೊಡಸಿದ್ದ ಬೆಲ್ಟ್ ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ