ಧಾರವಾಡ : ಯಾವುದೋ ಸಹವಾಸದಿಂದಾಗಿ ತಂಬಾಕು ಮತ್ತದರ ಇತರೇ ಉತ್ಪನ್ನಗಳ ದುಶ್ಚಟಗಳ ದಾಶ್ಯತ್ವ ಹೊಂದುತ್ತಿರುವ ಮನುಕುಲವು ಆರೋಗ್ಯದ ಉಲ್ಲಾಸವನ್ನೇ ಕಳೆದುಕೊಳ್ಳುತ್ತಿದೆ. ತಂಬಾಕು ಮುಕ್ತ ಬದುಕಿನಿಂದ ಆರೋಗ್ಯ ಸಂವರ್ಧನೆಯಾಗಿ ಮನುಕುಲವು ಚೈತನ್ಯದಿಂದ ನಳನಳಿಸುತ್ತದೆ ಎಂದು ಹುಬ್ಬಳ್ಳಿ-ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ರೋಗ ಲಕ್ಷಣಗಳ ತಜ್ಞ ಡಾ. ಉಮೇಶ ಹಳ್ಳಿಕೇರಿ ಹೇಳಿದರು.
ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ, ಶಿಬಿರದ ಪ್ರಾಯೋಜಕರಾದ ಓರಾಕಲ್ ಸಂಸ್ಥೆ ಮತ್ತು ಭಾರತೀಯ ಕ್ಯಾನ್ಸರ್ ಸಂಸ್ಥೆ ಜಂಟಿ ಸಹಯೋಗದಲ್ಲಿ ತಾಲೂಕಿನ ಮಂಡಿಹಾಳ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣೆ ಶಿಬಿರದಲ್ಲಿ 85 ರೋಗಿಗಳ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಿ ‘ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು’ ವಿಷಯವಾಗಿ ಮಾತನಾಡಿದರು. ಮಂಡಿಹಾಳ ಗ್ರಾ.ಪಂ. ಅಧ್ಯಕ್ಷೆ ಸಾವಕ್ಕ ಬರಡೆ ಶಿಬಿರ ಉದ್ಘಾಟಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಜೀವಕ್ಕ ಹರಿಜನ, ಸದಸ್ಯ ಬಸಪ್ಪ ಸಬರದ, ಪಿ.ಡಿ.ಓ. ನೀರಜ್ ಜಾಧÀವ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸ್ತ್ರೀ ರೋಗ ತಜ್ಞೆ ಡಾ. ಪ್ರಿಯಾಂಕಾ ನಾಯಕ ಗರ್ಭ ಕಂಠ ಕ್ಯಾನ್ಸರ್ ತಪಾಸಣೆ ಮಾಡಿದರು. ಭಾರತೀಯ ಕ್ಯಾನ್ಸರ್ ಸಂಸ್ಥೆಯ ಸಿಸ್ಟರ್ ಜ್ಯೋತಿ, ಸಂತಾನಿ ದಂಡಿನ, ಮೊಹಮ್ಮದ ಜಬೀರ, ಶಿಲ್ಪಾ ಹೂಲಿಕಟ್ಟಿ, ವೆಂಕಟೇಶ ಸಿ.ಎಲ್., ಮೇಘನಾ ನರೇಂದ್ರ, ಮಂಡಿಹಾಳ ಆಶಾ ಕಾರ್ಯಕರ್ತೆಯರಾದ ಕಸ್ತೂರಿ ಹೊಂಗಲ ಮತ್ತು ಬಸವ್ವ ಹಡಗದ ಶಿಬಿರ ಸಂಘಟನೆಗೆ ನೆರವಾದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ ವಿತರಿಸಲಾಯಿತು.