ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರಲ್ಲಿ, ಮುಖ್ಯ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಟೇಬಲ್ ಮೇಲೆ ಮಲಗಿ, ಮಕ್ಕಳಿಂದ ಕಾಲು ಒತ್ತಿಸಿಕೊಳ್ಳುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಹರೂರು ಬಳಿಯ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಾಲೆಯ ಮುಖ್ಯ ಶಿಕ್ಷಕಿ ಕಳೈವಾನಿ ಅವರು, ತರಗತಿಯಲ್ಲೇ ಟೇಬಲ್ ಮೇಲೆ ಮಲಗಿಕೊಂಡು ವಿದ್ಯಾರ್ಥಿಗಳಿಗೆ ಕಾಲು ಒತ್ತುವಂತೆ ಸೂಚಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ಶಾಲೆಯಲ್ಲಿ ಸುಮಾರು 30 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಅಧಿಕಾರಿಗಳಿಂದ ತನಿಖೆ ಆರಂಭ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಕ್ಷಣ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಅಮಾನವೀಯ ಘಟನೆಯು ಶಿಕ್ಷಣ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು ಶಿಕ್ಷಕಿಯ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.



















