ಬಾಗಲಕೋಟೆ: ವಿದ್ಯಾರ್ಥಿನಿ(Student)ಯೋರ್ವಳು ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದು, ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಮುಧೋಳ (Mudhol) ನಗರದಲ್ಲಿ ನಡೆದಿದೆ. ಶಾರದಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರಥಮ ವರ್ಷ ಓದುತ್ತಿದ್ದ ತೇಜಸ್ವಿನಿ ದೊಡಮನಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ (Science Exam) ವಿದ್ಯಾರ್ಥಿನಿ ನಕಲು(Copy) ಮಾಡಿ ಸಿಕ್ಕು ಬಿದ್ದಿದ್ದಳು. ಸಿಬ್ಬಂದಿ ತೇಜಸ್ವಿನಿಯನ್ನು ಪ್ರಶ್ನೆ ಮಾಡಿ ಬುದ್ಧಿವಾದ ಹೇಳಿದ್ದರು.
ಬುದ್ಧಿವಾದ ಹೇಳಿದ ವಿಚಾರವನ್ನು ತೇಜಸ್ವಿನಿ ಮನೆಗೆ ಬಂದು ಹೇಳಿದ್ದಾಳೆ. ಪೋಷಕರು ಮರುದಿನ ಶಾಲೆಗೆ ಬಂದು ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ಪರೀಕ್ಷೆಯಲ್ಲಿ ಆಕೆ ನಕಲು ಮಾಡುತ್ತಿದ್ದಳು ಎಂಬ ವಿಚಾರ ಹೇಳಿದ್ದಾರೆ. ಆಗ ನಕಲು ಮಾಡಿಲ್ಲ ಎಂದು ತೇಜಸ್ವಿನಿ ವಾದಿಸಿದ್ದಾಳೆ. ಕಾಲೇಜು ಸಿಬ್ಬಂದಿ ಸಿಸಿ ಕ್ಯಾಮೆರಾ ಪರೀಕ್ಷಿಸಲು ಮುಂದಾದಾಗ ಕಾಲೇಜಿನಿಂದಲೇ ತೇಜಸ್ವಿನಿ ಹೋಗಿದ್ದಾಳೆ. ತೇಜಸ್ವಿನಿ ಪೋಷಕರು ಮುಧೋಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಇಂದು ಮಹಾರಾಣಿ ಕರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.