ಹಾಸನ: ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಅವರ ಇಬ್ಬರೂ ಮಕ್ಕಳು ಜೈಲಿನಲ್ಲಿದ್ದಾರೆ. ಈ ಮಧ್ಯೆ ಅವರು ದೇವಸ್ಥಾನ ಸುತ್ತುತ್ತಿದ್ದು, ಈ ವೇಳೆ ಕಾಲು ಜಾರಿ ಬಿದ್ದಿದ್ದಾರೆ.
ಹೀಗಾಗಿ ರೇವಣ್ಣ (HD Revanna) ಅವರಿಗೆ ಪಕ್ಕೆಲುಬಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಹೊಳೆನರಸೀಪುರ (Holenarasipur) ತಾಲ್ಲೂಕಿನ ಹರದನಹಳ್ಳಿ ದೇವೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ರೇವಣ್ಣ ಅವರು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕಾದಶಿ ಪ್ರಯುಕ್ತ ಉಪವಾಸವಿದ್ದು, ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ಬರುವಾಗ ಜಾರಿ ಬಿದಿದ್ದು, ಪಕ್ಕೆಲುಬಿಗೆ ಪೆಟ್ಟಾಗಿದೆ.
ರೇವಣ್ಣ ಅವರ ಕುಟುಂಬಕ್ಕೆ ಸಂಕಷ್ಟಗಳು ಎದುರಾಗುತ್ತಿವೆ. ಹೀಗಾಗಿ ಅವರು ಇತ್ತೀಚೆಗೆ ಒಂದಾದ ಮೇಲೆ ಒಂದರಂತೆ ದೇವಸ್ಥಾನಗಳಿಗೆ ಮೊರೆ ಹೋಗಿದ್ದರು. ರೇವಣ್ಣ ಕಿಡ್ನ್ಯಾಪ್ ಕೇಸ್ ಎದುರಿಸುತ್ತಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನ ಕಿಡ್ನ್ಯಾಪ್ ಮಾಡಿದ್ದಾರೆ ಅಂತ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಸದ್ಯ ಬೇಲ್ ಮೇಲೆ ಹೊರಗೆ ಇದ್ದಾರೆ.