ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಸಂಸತ್ತಿನಲ್ಲಿ ರಾಜ್ಯದ ನೀರಾವರಿ ವಿಷಯಗಳನ್ನು ಪ್ರಸ್ತಾಪಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (HD Deve Gowda) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಲ್ಲದೆ, ರಾಜ್ಯ ನೀರಾವರಿ ಕುರಿತು ಭಾವುಕರಾಗಿ ಮಾತನಾಡಿದ ಅವರು, “ನೀರಾವರಿ ವಿಷಯದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಗಬೇಕು ಎಂಬುದೇ ನನ್ನ ಜೀವನದ ಕೊನೆಯ ಆಸೆ” ಎಂದು ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಎಚ್.ಡಿ.ದೇವೇಗೌಡರು ಸುದ್ದಿಗೋಷ್ಠಿ ನಡೆಸಿದರು. “ರಾಜ್ಯಕ್ಕೆ ನೀರಿನ ವಿಷಯದಲ್ಲಿ ನ್ಯಾಯ ಸಿಗಬೇಕು. ಅದೇ ನನ್ನ ಜೀವನದ ಕೊನೆಯ ಆಸೆ. ಈ ದೇಹ ಅಂತ್ಯ ಆಗುವುದರ ಒಳಗಾಗಿ ನಮ್ಮ ರಾಜ್ಯಕ್ಕೆ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯ ಸರಿ ಹೋಗಬೇಕು. ನಾನು ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಛಲವಿದೆ, ಬಗೆಹರಿಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ನಾನು ಹೋರಾಟ ಮಾಡುತ್ತೇನೆ” ಎಂದು ತಿಳಿಸಿದರು.
ಪಕ್ಷಭೇದವಿಲ್ಲದ ಹೋರಾಟ ಅಗತ್ಯ
“ಕಾವೇರಿ, ಕಳಸಾ ಬಂಡೂರಿ ಯೋಜನೆಗಳಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯ ಆಗಿದೆ. ಈಗ ಗೋದಾವರಿ – ಕಾವೇರಿ ಜೋಡಣೆ ಯೋಜನೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ನಾವು ದನಿಯೆತ್ತಬೇಕಿದೆ. ಕಳಸಾ ಬಂಡೂರಿ ಬಗ್ಗೆ ರಾಜ್ಯದ ಮುಖ್ಯಮಂತ್ರಿಯವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಈ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ಹೀಗಾಗಿ ಪ್ರಧಾನಿಗಳು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿ ಗೆಲ್ಲಬೇಕು. ರಾಜ್ಯ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಇದಕ್ಕಾಗಿ ಪಕ್ಷಭೇದವಿಲ್ಲದೆ ಎಲ್ಲರೂ ಹೋರಾಡಬೇಕು” ಎಂದು ತಿಳಿಸಿದರು.
“ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 ಟಿಎಂಸಿ ನೀರು ಹಂಚಿಕೆ ಆಗಬೇಕು. ಇದಕ್ಕಾಗಿ ಎಲ್ಲಾ ಪಕ್ಷಗಳನ್ನುಒಳಗೊಂಡು ಹೋರಾಟ ಮಾಡುತ್ತೇನೆ. 25 ಟಿಎಂಸಿ ಅಡಿ ನೀರು ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಂಸದರ ಜತೆಗೂಡಿ ಹೋರಾಟ ನಡೆಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ” ಎಂದು ಹೇಳಿದರು.