ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು (H. D. Deve Gowda) ಇರುವುದೇ ಹಾಗೆ. ರಾಜಕೀಯ, ರಾಜ್ಯದ ವಿಚಾರಗಳ ವಿಷಯದಲ್ಲಿ ಅವರು ಇಂದಿಗೂ ಯುವಕರೇ. ಇದೇ ಕಾರಣಕ್ಕಾಗಿ ಅವರು ವಯಸ್ಸನ್ನೂ ರಾಜ್ಯಸಭೆಯ ಪ್ರತಿಯೊಂದು ಕಲಾಪಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಅಷ್ಟೇ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಂಡ ಅವರ ರಾಜ್ಯದ ಪರವಾಗಿ ಧ್ವನಿಯೆತ್ತಿದ್ದಾರೆ. ಅದರಲ್ಲೂ ಜ್ವರವನ್ನೂ ಲೆಕ್ಕಿಸದೆ ಅವರು ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯಸಭೆ ಕಲಾಪದಲ್ಲಿ ಬಜೆಟ್ ಕುರಿತು ಮಾತನಾಡಿದ ದೇವೇಗೌಡರು, ಅನಾರೋಗ್ಯದ ಮಧ್ಯೆಯೇ ಕರ್ನಾಟಕದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. “ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿ ಆಗಿದೆ. ಗ್ರಾಮೀಣ ಪ್ರದೇಶಗಳ ಯುವಕರು ಪದವಿ ಪಡೆಯುತ್ತಲೇ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಉದ್ಯೋಗ ನೀಡುವ ಹೊಣೆ ಸರ್ಕಾರಗಳದ್ದಾಗಿದೆ” ಎಂದು ದೇವೇಗೌಡರು ಹೇಳಿದ್ದಾರೆ.
ಯುವಕರು ಬೆಂಗಳೂರಿಗೆ ಬರುವುದನ್ನು ತಪ್ಪಿಸಬೇಕು ಎಂದರೆ, ಅವರು ಇರುವ ಪ್ರದೇಶಗಳಲ್ಲಿಯೇ ಉದ್ಯೋಗ ಸಿಗುವಂತಾಗಬೇಕು. ಇದಕ್ಕಾಗಿ ಎಂಎಸ್ ಎಂಇಗಳಿಗೆ ಹೆಚ್ಚಿನ ಉದ್ಯೋಗ ನೀಡಬೇಕು. ಸ್ಥಳೀಯವಾಗಿಯೇ ಯುವಕರಿಗೆ ಉದ್ಯೋಗ ದೊರೆತರೆ ಅವರು ಮಹಾನಗರದತ್ತ ಆಗಮಿಸುವುದು ತಪ್ಪುತ್ತದೆ ಎಂದು ಒತ್ತಿ ಹೇಳಿದರು.
ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳ ಜತೆ ಸಣ್ಣ ಕೈಗಾರಿಕೆಗಳು ಸ್ಪರ್ಧಿಸಲು ಆಗುತ್ತಿಲ್ಲ. ಸಣ್ಣ ಕೈಗಾರಿಕೆಗಳಿಗಾಗಿಯೇ ಪ್ರತ್ಯೇಕ ನೀತಿ ರಚಿಸಬೇಕು. ಸಣ್ಣ ಕೈಗಾರಿಕೆಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಶೇ.8ರಿಂದ ಶೇ.7ಕ್ಕೆ ಇಳಿಸಬೇಕು. ಹಾಗೆಯೇ, ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡುವುದು ಸದ್ಯದ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. ಭಾಷಣ ಆರಂಭಿಸುತ್ತಲೇ ನಿರ್ಮಲಾ ಸೀತಾರಾಮನ್ ಅವರಿಗೆ ಗೌಡರು ಅಭಿನಂದನೆ ಸಲ್ಲಿಸಿದರು. ಸರ್ವರಿಗೂ ಅನುಕೂಲವಾಗುವ ಬಜೆಟ್ ಮಂಡಿಸಿದ್ದೀರಿ ಎಂದರು.