ಹಾವೇರಿ : ಕೆಎಸ್ಆರ್ಟಿಸಿ ಜಾಗೃತದಳದ ಸಮಯಪ್ರಜ್ಞೆಯಿಂದ ಯುವತಿಯೊಬ್ಬರು 1 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ಟಾಪ್ ಮರಳಿ ಪಡೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಗೋಪನಕೊಪ್ಪ ಗ್ರಾಮದ ಶಿಲ್ಪಾ ವಿರುಪಾಕ್ಷ ವಾಸನ ಎಂಬವರು ಲ್ಯಾಪ್ಟಾಪ್ ಸಿಬ್ಬಂದಿಗಳು ಮರಳಿಸಿದ್ದಾರೆ. ಶಿಲ್ಪಾ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಎ:63 ಎಫ್: 248 ಹುಬ್ಬಳ್ಳಿ ಘಟಕ-1 ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಹಾವೇರಿ ಬಸ್ ನಿಲ್ದಾಣದಲ್ಲಿ ನಿರ್ವಾಹಕರಿಗೆ ತಿಳಿಸಿ ಬ್ಯಾಗ್ ಅನ್ನು ಬಸ್‌ನಲ್ಲಿಯೇ ಬಿಟ್ಟು ವಾಷ್ ರೂಮ್ಗೆ ಹೋಗಿದ್ದರು. ಆದರೆ, ಸಮಯವಾಗಿದ್ದರಿಂದ ನಿರ್ವಾಹಕ ಯುವತಿಯ ಬ್ಯಾಗ್ ವಿಷಯ ಮರೆತು ಬಸ್ ಅನ್ನು ಶಿಗ್ಗಾಂವ್ ಕಡೆ ಚಲಾಯಿಸಿದ್ದರು. ಇತ್ತ ಬ್ಯಾಗ್ ಬಿಟ್ಟ ಯುವತಿ ವಾಷ್ ರೂಮ್ನಿಂದ ಬಸ್ ಕಡೆ ಬಂದಾಗ ಬಸ್ ಇರದ ಕಾರಣ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಇದೇ ವೇಳೆ, ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್ಆರ್ಟಿಸಿ ಜಾಗೃತದಳದ ಕಾನ್ಸ್ಟೆಬಲ್ ಎನ್.ಎಂ.ಬೆನಕನಹಳ್ಳಿ ಅವರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕಾನ್ಸ್ಟೇಬಲ್ ಮುಂದಿನ ನಿಲ್ದಾಣವಾದ ಶಿಗ್ಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರು ಬಸ್‌ನಲ್ಲಿ ಬಿಟ್ಟು ಹೋಗಿದ್ದ 2 ಲ್ಯಾಪ್ಟಾಪ್ವುಳ್ಳ ಬ್ಯಾಗ್, ಪರ್ಸ್ ಹಾಗೂ ಇತರೆ ವಸ್ತುಗಳನ್ನೊಳಗೊಂಡ ಬ್ಯಾಗ್ಗಳನ್ನು ಖಚಿತಪಡಿಸಿದ್ದಾರೆ.
ಅಲ್ಲದೆ, ಬಸ್ನಲ್ಲಿದ್ದ ಲ್ಯಾಪ್ಟಾಪ್ ಬ್ಯಾಗ್ ಮತ್ತು ಉಡುಪುಗಳಿದ್ದ ಬ್ಯಾಗನ್ನು ಭದ್ರತಾ ಮತ್ತು ಜಾಗೃತ ಅಧಿಕಾರಿಗಳು ವಾಪಸ್ ಹಾವೇರಿಗೆ ತಂದಿದ್ದಾರೆ. ಹಾವೇರಿ ವಿಭಾಗದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಿಬ್ಬಂದಿ ಯುವತಿಗೆ ಅವರ ಲ್ಯಾಪ್ಟಾಪ್ ನೀಡಿದ್ದಾರೆ. ಕಳೆದುಹೋದ ಲ್ಯಾಪ್ಟಾಪ್ ಮರಳಿ ಸಿಕ್ಕಿದ್ದಕ್ಕೆ ಶಿಲ್ಪಾ ಕೆಎಸ್ಆರ್ಟಿಸಿ ಜಾಗೃತದಳದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ : ಬಿಹಾರ ಚುನಾವಣೆ ಚುನಾವಣೆಯೇ ಅಲ್ಲ- ಸಚಿವ ರಾಮಲಿಂಗಾರೆಡ್ಡಿ ಕಿಡಿ



















