ಹಾವೇರಿ : ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಅಡವಿ ಆಂಜನೇಯ ಬಡಾವಣೆಯ ಚಂದ್ರು ಮಲ್ಲೇಶಪ್ಪ ಮತ್ತೂರ (32) ಹಾಗೂ ಧಾರವಾಡದ ಮುನ್ನಾಬಾದ್ ಓಣಿಯ ನಿವಾಸಿ ದಾವುಲ್ ಮಲ್ಲಿಕಾ ರಫೀಕ್ ಅಹಮ್ಮದ್ (21) ಎಂದು ಗುರುತಿಸಲಾಗಿದೆ. ರಾಣೇಬೆನ್ನೂರು ಹೊರವಲಯದಲ್ಲಿರುವ ಅಡವಿ ಆಂಜನೇಯ ಬಡಾವಣೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಸುಮಾರು 1 ಕೆಜಿ ಗಾಂಜಾ, ಒಂದು ಬ್ಯಾಗ್, ಒಂದು ತೂಕದ ಯಂತ್ರ ಹಾಗೂ ಪಲ್ಸರ್ ಬೈಕ್ ಸೇರಿದಂತೆ ಒಟ್ಟು ಸುಮಾರು ₹87 ಸಾವಿರ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಚಂದ್ರು ಮತ್ತೂರ ರಾಣೇಬೆನ್ನೂರು ನಗರದ ಕೆನರಾ ಬ್ಯಾಂಕ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಮತ್ತೊಬ್ಬ ಆರೋಪಿ ದಾವುಲ್ ಮಲ್ಲಿಕ್ ಹಾವೇರಿಯ ಸುಹಾಸ್ ಸರ್ಕಲ್ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಈ ದಾಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಹಾಗೂ ರಾಣೇಬೆನ್ನೂರು ಉಪವಿಭಾಗದ ಉಪಾಧೀಕ್ಷಕ ಜೆ. ಲೋಕೇಶ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಟ್ರಬಲ್ : 200ಕ್ಕೂ ಹೆಚ್ಚು ಹೋಟೆಲ್ ಸಿಬ್ಬಂದಿಯ ಕೆಲಸಕ್ಕೂ ಕುತ್ತು



















