ಬೆಂಗಳೂರು | ನಿರ್ದೇಶಕ ಹೇಮಂತ್ ರಾವ್ ಅವರ ಆಪರೇಷನ್ ಡ್ರೀಮ್ ಥಿಯೇಟರ್ 666 ಚಿತ್ರ ತಂಡವು ತಮ್ಮ ಬೊಕ್ಕಸದಿಂದ ಮತ್ತೊಂದು ಪ್ರಮುಖ ಪಾತ್ರವನ್ನು ಘೋಷಿಸಿದೆ. ಖ್ಯಾತ ನಟಿ, ತಮಿಳಿನ ರಾಜ್ಯ ಪ್ರಶಸ್ತಿ ಪುರಸ್ಕೃತೆ, ಅದಿತಿ ಬಾಲನ್ ಅವರು ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಅದಿತಿ ಬಾಲನ್ “ಅರುವಿ” ಎಂಬ ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಅಭಿನಯದಿಂದ ಎಲ್ಲರ ಮನೆಮಾತಾಗಿದ್ದರು. ತದನಂತರ ಕ್ಯಾಪ್ಟನ್ ಮಿಲ್ಲರ್, ಪಡವೆಟ್ಟು ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಆಪರೇಷನ್ ಡ್ರೀಮ್ ಥಿಯೇಟರ್ 666ನಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಆಪರೇಷನ್ ಡ್ರೀಮ್ ಥಿಯೇಟರ್ 666 ಚಿತ್ರವು ಈಗಾಗಲೇ ತನ್ನ ಪಾತ್ರಗಳ ಮೂಲಕವೇ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಕರುನಾಡ ಚಕ್ರವರ್ತಿ ಡಾ ಶಿವರಾಜಕುಮಾರ್ ಅವರು ಏಜೆಂಟ್ ಪ್ರಕಾಶ್ ಆಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳ ಹೃದಯ ಗೆದ್ದಿತ್ತು. ಅವರ ಈ ಪಾತ್ರವು ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿ ಡಾ ರಾಜಕುಮಾರ್ ಅವರ ಪಾತ್ರಕ್ಕೆ ಗೌರವ ಸಲ್ಲಿಸುವುದು. ನಂತರ ಚಿತ್ರ ತಂಡವು ನಟರಾಕ್ಷಸ ಡಾಲಿ ಧನಂಜಯ್ ರನ್ನ ಏಜೆಂಟ್ ಶಂಕರ್ ಆಗಿ ಪರಿಚಯಿಸಿತು. ಇದೀಗ ನಟಿ ಅದಿತಿ ಬಾಲನ್ ಏಜೆಂಟ್ ಕಾವೇರಿಯಾಗಿ ಪರಿಚಯಿಸಿರುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಈ ಚಿತ್ರವು ಈಗಷ್ಟೇ ಚಿತ್ರೀಕರಣದ ಐದನೇ ಶೆಡ್ಯೂಲನ್ನು ಮುಗಿಸಿದ್ದು, ಇದೀಗ ತನ್ನ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡುತ್ತಿದೆ. ಹೇಮಂತ್ ರಾವ್ ನಿರ್ದೇಶನದ ಆಪರೇಷನ್ ಡ್ರೀಮ್ ಥಿಯೇಟರ್ 666 ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಮುಂತಾದವರು ನಟಿಸಿದ್ದು, ಈ ಚಿತ್ರವನ್ನು ಡಾ ವೈಶಾಖ್ ಜೆ ಗೌಡ, ವೈಶಾಖ್ ಜೆ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುತ್ತಾರೆ.
ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಹರಾಗಿ, ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಇಂಚರ ಸುರೇಶ್ ವಸ್ತ್ರ ವಿನ್ಯಾಸ ಮಾಡಿರುತ್ತಾರೆ. ಆಪರೇಷನ್ ಡ್ರೀಮ್ ಥಿಯೇಟರ್ 666 ಒಂದು ಆಕ್ಷನ್, ಡ್ರಾಮಾ ಮತ್ತು ಥ್ರಿಲ್ನ ನೂತನ ಪ್ರಯತ್ನವಾಗಿರುತ್ತದೆ. ಏಜೆಂಟ್ಗಳನ್ನು ಮುಖ್ಯ ಪಾತ್ರಗಳಲ್ಲಿ ಹೊಂದಿರುವ ಈ ಚಿತ್ರವು ಒಂದು ವಿಭಿನ್ನವಾದ ಥ್ರಿಲ್ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ. ಇದೇ ವರ್ಷದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ಚಿತ್ರತಂಡದ ಗುರಿಯಾಗಿದೆ.
ಇದನ್ನೂ ಓದಿ : ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ : ಕಾರ್ಖಾನೆಗಳಿಗೆ ಬೀಗ ಫಿಕ್ಸ್



















